ಇತ್ತೀಚೆಗಷ್ಟೇ ಚಿತ್ರರಂಗದ ಹಲವು ಚಟುವಟಿಕೆ ನಡೆಸಲು ಅನುಮತಿಗಾಗಿ ವಾಣಿಜ್ಯ ಮಂಡಳಿ ಮಾಡಿದ್ದ ಮನವಿಗೆ ಸ್ಪಂದಿಸಿದ್ದ ರಾಜ್ಯ ಸರ್ಕಾರ ಇದೀಗ ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಅನುಮತಿ ನೀಡಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್ ಮತ್ತಿತರರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದ್ದು, ಆ ಮನವಿಗೆ ಸಿಎಂ ಸ್ಪಂದಿಸಿದ್ದರು. ಈಗ ನಿರ್ಮಾಪಕರ ಸಂಘ ಕೂಡ ಭಾನುವಾರ ಕಂದಾಯ ಸಚಿವ ಆರ್.ಅಶೋಕ್ ಅವರ ಮೂಲಕ ಸಿಎಂ ಅವರನ್ನು ಮನವಿ ಮಾಡಿದ ಹಿನ್ನೆಲೆಯಲ್ಲಿ ಸೋಮವಾರದಿಂದ (ಇಂದಿನಿಂದ) ಸಿನಿಮಾ ಚಟುವಟಕೆಗಳನ್ನು ನಡೆಸಲು ಅನುಮತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಚಿತ್ರಗಳ ಡಬ್ಬಿಂಗ್, ಎಡಿಟಿಂಗ್, ಹಿನ್ನೆಲೆ ಸಂಗೀತ, ಸಿಜಿ ವರ್ಕ್ ಮತ್ತು ಗ್ರಾಫ್ರಿಕ್ಸ್ ಇತ್ಯಾದಿ ಕೆಲಸಗಳನ್ನು ಮಾಡಿಕೊಳ್ಳಲು ಸರ್ಕಾರದಿಂದ ಗ್ರೀನ್‌ಸಿಗ್ನಲ್ ಸಿಕ್ಕಿದೆ. ಸ್ಟುಡಿಯೋಗಳಲ್ಲಿ ಕೇವಲ ಏಳೆಂಟು ಜನರು ಮಾತ್ರ ಕೆಲಸ ಮಾಡಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಜೊತೆಗೆ ಸ್ಟುಡಿಯೋದಲ್ಲಿ ಸ್ಯಾನಿಟೈಸರ್ ಇಟ್ಟುಕೊಂಡು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ನಿರ್ಮಾಪಕರ ಸಂಘ ಹೇಳಿದೆ. ಕನ್ನಡ ಚಿತ್ರರಂಗದಲ್ಲಿ ಸುಮಾರು 750 ಕೋಟಿ ರುಪಾಯಿಗು ಹೆಚ್ಚು ಹೂಡಿಕೆ ಮಾಡಲಾಗಿದ್ದು, ಲಾಕ್ ಡೌನ್ ಹಿನ್ನೆಲೆಯಲ್ಲಿ ಕಾರ್ಮಿಕರು, ತಂತ್ರಜ್ಞರು, ಕಲಾವಿದರು ಸಂಕಷ್ಟದಲ್ಲಿದ್ದರು. ಇಂದು ನೂರಾರು ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಂದ ನಿಂತಿರುವುದರಿಂದ ಸಮಸ್ಯೆ ತಲೆದೋರಿದೆ. ಹೀಗಾಗಿ,ಪೋಸ್ಟ್ ಪ್ರೊಡಕ್ಷನ್ಸ್‌ಗೆ ಅನುಮತಿ ಕೊಡಬೇಕು ಎಂಬ ಮನವಿ ಮಾಡಿದ್ದರಿಂದ ಸರ್ಕಾರ ಸ್ಪಂದಿಸಿ, ಅನುಮತಿ ಕೊಟ್ಟಿದೆ.
ಕಂದಾಯ ಸಚಿವ ಆರ್.ಅಶೋಕ್ ಅವರ ಭೇಟಿ ಸಂದರ್ಭದಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಉಪಾಧ್ಯಕ್ಷ ಎಂ.ಜಿ.ರಾಮಮೂರ್ತಿ, ಕಾರ್ಯದರ್ಶಿ ಕೆ.ಮಂಜು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಎ.ಗಣೇಶ್, ಕಾರ್ಮಿಕರ ಒಕ್ಕೂಟದ ಉಪಾಧ್ಯಕ್ಷ ರವಿಶಂಕರ್ ಹಾಜರಿದ್ದರು. ಈ ವೇಳೆ ಆರ್.ಅಶೋಕ್ ಅವರು, ಚಿತ್ರೀಕರಣಕ್ಕೆ ಅನುಮತಿ ಕೊಡಲು ಸಾಧ್ಯವಿಲ್ಲ. ಆದರೆ, ಡಬ್ಬಿಂಗ್, ಎಡಿಟಿಂಗ್, ಗ್ರಾಫ್ರಿಕ್ಸ್, ರೀ ರೆಕಾರ್ಡಿಂಗ್ ಇತರೆ ಚಟುವಟಕೆ ನಡೆಸಲು ಸರ್ಕಾರ ಅನುಮತಿ ಕೊಡಲಿದೆ. ಈ ವೇಳೆ ಸರ್ಕಾರದ ನಿಯಮ ಉಲ್ಲಂಘನೆ ಮಾಡದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದಿದ್ದಾರೆ. ಚಿತ್ರೀಕರಣ ಹೊರತುಪಡಿಸಿ, ಇತರೆ ಚಟುವಟಿಕೆ ನಡೆಸಲು ಅನುಮತಿ ನೀಡಿದ ಸಿ.ಎಂ.ಯಡಿಯೂರಪ್ಪ, ಆರ್. ಅಶೋಕ್ ಅವರಿಗೆ ನಿರ್ಮಾಪಕರ ಸಂಘ ಧನ್ಯವಾದ ಅರ್ಪಿಸಿದೆ.