ಬೆಂಗಳೂರು: ಕಚೇರಿಗಳಲ್ಲಿ ಕೆಲಸಮಾಡುವ ವರ್ಗಕ್ಕೆ ಗುರುತಿನ ಚೀಟಿ ನೀಡುವಂತೆ ರೈತರಿಗೂ “ಸ್ವಾಭಿಮಾನಿ ರೈತ’ ಗುರುತಿನ ಚೀಟಿ ನೀಡಲು ಸರ್ಕಾರ ಮುಂದಾಗಿದೆ.
ಕೃಷಿ ಸಚಿವ ಬಿ.ಸಿ.ಪಾಟೀಲ್ ಜ.9 ರಂದು ಕೊಪ್ಪಳದಲ್ಲಿ ಈ ” ಸ್ವಾಭಿಮಾನಿ ರೈತ” ಗುರುತಿನ ಚೀಟಿ ವಿತರಣೆಗೆ ಚಾಲನೆ ನೀಡಲಿದ್ದಾರೆ. ತಂತ್ರಾಂಶದಲ್ಲಿ ನೋಂದಾಯಿಸಲ್ಪಟ್ಟಿರುವ ರೈತರಿಗೆ ಸ್ವಾಭಿಮಾನಿ ರೈತರ ಗುರುತಿನ ಚೀಟಿ ನೀಡಲಾಗುತ್ತಿದೆ.
“ಸ್ವಾಭಿಮಾನಿ ರೈತ” ಗುರುತಿನ ಚೀಟಿ ಎಂದರೇನು?
ರಾಜ್ಯದ ಇ – ಆಡಳಿತ ಇಲಾಖೆಯು ಎನ್.ಐ.ಸಿ ಮೂಲಕ ರಾಜ್ಯದ ರೈತರ ವಿವರಗಳನ್ನು ದಾಖಲಿಸಲು FRUITS ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ. ಪ್ರತಿಯೊಬ್ಬ ರೈತರಿಗೆ ಒಂದು ಪ್ರತ್ಯೇಕ ಗುರುತಿನ ಸಂಖ್ಯೆಯನ್ನು ನೀಡುವುದು FRUITS ತಂತ್ರಾಂಶದಲ್ಲಿ ರೈತರ ನೋಂದಣಿಯ ಉದ್ದೇಶವಾಗಿರುತ್ತದೆ. ಸದರಿ ಗುರುತಿನ ಸಂಖ್ಯೆಯ ಆಧಾರದಲ್ಲಿ ರೈತರು FRUITS ತಂತ್ರಾಂಶ ಬಳಸುವ ಎಲ್ಲಾ ಇಲಾಖೆಗಳ ಸೌಲಭ್ಯಗಳನ್ನು ಪಡೆಯಬಹುದಾಗಿರುತ್ತದೆ . ರೈತರು ಪಡೆಯುವ ಎಲ್ಲಾ ಇಲಾಖೆಗಳ ಸೌಲಭ್ಯಗಳು ಅವರ ಗುರುತಿನ ಸಂಖ್ಯೆಗೆ ದಾಖಲಾಗುತ್ತದೆ. ಈ ತಂತ್ರಾಂಶದಲ್ಲಿ ರೈತರ ನೋಂದಣಿಯು ಜೂನ್ 2018 ರಿಂದ ಪ್ರಾರಂಭವಾಗಿದ್ದು, ಕೃಷಿ ತೋಟಗಾರಿಕೆ, ರೇಷ್ಮೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗಳಲ್ಲಿ ರೈತರನ್ನು FRUITS ತಂತ್ರಾಂಶದಲ್ಲಿ ನೋಂದಾಯಿಸಲಾಗುತ್ತಿದೆ.
ಈ ತಂತ್ರಾಂಶದಲ್ಲಿ ಆಧಾರ್ ಕಾರ್ಡ, ಪಹಣಿ (RTC ), ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ರೈತರ ಜಾತಿ ಪ್ರಮಾಣ ಪತ್ರ, ಬ್ಯಾಂಕ್ ವಿವರ, ಫೋಟೊ ಇತ್ಯಾದಿ ದಾಖಲಾತಿಗಳನ್ನು ಪರಿಶೀಲಿಸಿ ರೈತರ ನೋಂದಣಿ ಮಾಡಲಾಗುತ್ತದೆ. ರೈತರ ಹಿಡುವಳಿ ವಿವರವನ್ನು ಕಂದಾಯ ಇಲಾಖೆಯ ‘ಭೂಮಿ ‘ ತಂತ್ರಾಂಶದಿಂದ ಪಡೆಯಲಾಗುತ್ತದೆ.
ಪ್ರತಿ ನೋಂದಾಯಿತ ರೈತರಿಗೂ ಪ್ರತ್ಯೇಕ ನೋಂದಣಿ ಸಂಖ್ಯೆ ನೀಡಲಾಗುತ್ತದೆ. ಯಾವುದೇ ದಾಖಲಾತಿಗಳು ಇಲ್ಲದೆ ನಂತರದ ದಿನಗಳಲ್ಲಿ ಇಲಾಖೆಗಳನ್ನು ಸೌಲಭ್ಯಗಳಿಗಾಗಿ ಸಂಪರ್ಕಿಸಿದಾಗ ನೋಂದಣಿ ಸಂಖ್ಯೆಯನ್ನು ರೈತರು ಬರೆದಿಟ್ಟುಕೊಂಡು , ನೆನಪಿನಲ್ಲಿಟ್ಟುಕೊಂಡು ಸರಿಯಾದ ಸಂಖ್ಯೆಯನ್ನು ನೀಡುವುದು ಕಷ್ಟವಾಗುವ ಹಿನ್ನಲೆಯಲ್ಲಿ ವಿವಿಧ ದಾಖಲಾತಿಗಳನ್ನು, ಭೂ ಹಿಡುವಳಿ ವಿವರಗಳನ್ನು ಪರಿಶೀಲಿಸಿ ನೋಂದಾಯಿಸಿದ ರೈತರಿಗೆ FRUITS ನೋಂದಣಿ ಸಂಖ್ಯೆ ಆಧಾರಿತ ಗುರುತಿನ ಚೀಟಿಯನ್ನು ನೀಡಲು ಸರ್ಕಾರ ಮುಂದಾಗಿದೆ.
ಇದನ್ನೂ ಓದಿ:ಪರಿಷತ್ ಗದ್ದಲ ಪ್ರಕರಣ: ತನಿಖಾ ಸಮಿತಿಗೆ ಬಿಜೆಪಿ ವಿರೋಧ, ಸದಸ್ಯರ ರಾಜೀನಾಮೆ
ಗುರುತಿನ ಚೀಟಿಯಿಂದೇನು ಲಾಭ?
ಇದರಿಂದ ರೈತರು ಬೆಳೆ ಸಾಲ, ಪಿ.ಎಂ. ಕಿಸಾನ್ ಮುಂತಾದ ವಿವಿಧ ಯೋಜನೆಗಳಡಿ ಸಹಾಯಧನ ಪಡೆಯಲು ಕಚೇರಿಗಳಲ್ಲಿ ವ್ಯಯಿಸಬೇಕಾದ ಸಮಯವನ್ನು ಉಳಿಸಬಹುದು ಹಾಗೂ ರೈತರಿಗೆ ಇದು ಒಂದು ವ್ಯವಹಾರಿಕ ಗುರುತಿನ ಚೀಟಿಯಾಗುತ್ತದೆ.