Advertisement

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ನ್ಯಾಕ್‌ ಮಾನ್ಯತೆಯತ್ತ

12:41 AM Jan 24, 2023 | Team Udayavani |

ಮಂಗಳೂರು: ರಾಜ್ಯದ ಎಲ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ಕಡ್ಡಾಯ ವಾಗಿ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್‌ (ನ್ಯಾಕ್‌) ಮಾನ್ಯತೆ ಪಡೆಯಬೇಕು ಎನ್ನುವ ಕಾಲೇಜು ಶಿಕ್ಷಣ ಇಲಾಖೆಯ ಸೂಚನೆಯಂತೆ ಮಂಗಳೂರು ಪ್ರಾದೇಶಿಕ ಕಚೇರಿಯ ವ್ಯಾಪ್ತಿಯ ಕಾಲೇಜುಗಳೂ ಮಾನ್ಯತೆ ಪಡೆಯುತ್ತಿವೆ. ಬಹುತೇಕ ಕಾಲೇಜು ಗಳು ಉತ್ತಮ ದರ್ಜೆಯನ್ನೇ ಪಡೆದಿವೆ.

Advertisement

ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಒಟ್ಟು 37 ಸರಕಾರಿ ಪ್ರ. ದ. ಕಾಲೇಜು ಗಳಿದ್ದು, 22 ಕಾಲೇಜುಗಳು ಈಗಾಗಲೇ ಮಾನ್ಯತೆ ಪಡೆದಿವೆ. 3 ಕಾಲೇಜುಗಳಿಗೆ ನ್ಯಾಕ್‌ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಒಂದು ಕಾಲೇಜು ಫಲಿತಾಂಶ (ಗ್ರೇಡ್‌) ನಿರೀಕ್ಷೆಯಲ್ಲಿದೆ. 7 ಕಾಲೇಜುಗಳಿಗೆ ನ್ಯಾಕ್‌ ಪೀರ್‌ ತಂಡದ ಭೇಟಿಗೆ ದಿನಾಂಕ ನಿಗದಿಯಾಗಿದೆ.

ಯುಜಿಸಿ ಸೇರಿದಂತೆ ಸರಕಾರದ ವಿವಿಧ ಅನುದಾನಗಳು, ಸೌಲಭ್ಯಗಳು ದೊರೆಯಬೇಕಾದರೆ ನ್ಯಾಕ್‌ ಮಾನ್ಯತೆ ಕಡ್ಡಾಯ. ಈ ಮಾನ್ಯತೆ 5 ವರ್ಷಗಳ ಅವಧಿಯದ್ದಾಗಿದ್ದು, ಬಳಿಕ ಕಾಲೇಜುಗಳು ಮತ್ತೆ ಮೌಲ್ಯಮಾಪನಕ್ಕೆ ಒಳಗಾಗಬೇಕು. ಕಾಲೇಜುಗಳಿಗೆ ಒಂದು ಬಾರಿ ಮೌಲ್ಯಾಂಕನಕ್ಕೆ ಒಳಗಾಗಲು ಸುಮಾರು 5 ಲಕ್ಷ ರೂ. ವರೆಗೆ ಅಗತ್ಯವಿದ್ದು, ಸರಕಾರವೇ ಈ ಅನುದಾನ ಬಿಡುಗಡೆ ಮಾಡುತ್ತಿದೆ.

ನಾಲ್ಕು ಕಾಲೇಜುಗಳು ಬಾಕಿ
ನ್ಯಾಕ್‌ ಪರಿಶೀಲನೆಗೆ ಒಳಪಡಲು ಪ್ರಸ್ತುತ ನಾಲ್ಕು ಕಾಲೇಜುಗಳು ಮಾತ್ರ ಬಾಕಿ ಉಳಿದಿವೆ. ಮಡಿಕೇರಿ ಸ.ಪ್ರ. ದರ್ಜೆ ಕಾಲೇಜು, ಮಡಿಕೇರಿ ಸ.ಪ್ರ.ದ. ಮಹಿಳಾ ಕಾಲೇಜು, ಪುತ್ತೂರು ಸ.ಪ್ರ.ದ. ಮಹಿಳಾ ಕಾಲೇಜು ಮತ್ತು ಬಂಟ್ವಾಳ ಕನ್ಯಾನ ಸ.ಪ್ರ. ದರ್ಜೆ ಕಾಲೇಜುಗಳು ಇನ್ನಷ್ಟೇ ಮಾನ್ಯತೆ ಪಡೆಯಬೇಕಾಗಿದೆ. ಈ ಕಾಲೇಜುಗಳು ಮೂಲ ಸೌಕರ್ಯದಲ್ಲಿ ಹಿಂದೆ ಉಳಿದಿದ್ದು, ಇದರಿಂದಾಗಿ ನ್ಯಾಕ್‌ಗೆ ಹೋಗಲು ಹಿಂದೇಟು ಹಾಕಿವೆ.

ಬಲ್ಮಠ ಏಕೈಕ “ಎ’ ಗ್ರೇಡ್‌ ಕಾಲೇಜು
ಮಂಗಳೂರು ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ಬಲ್ಮಠ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಸ್ತುತ “ಎ’ ಗ್ರೇಡ್‌ ಪಡೆದಿರುವ ಏಕೈಕ ಕಾಲೇಜು. ಇತ್ತೀಚೆಗಷ್ಟೇ ಈ ಮಾನ್ಯತೆ ತನ್ನದಾಗಿಸಿಕೊಂಡಿದೆ. ಉಳಿದಂತೆ ಕುಂದಾಪುರದ ಶಂಕರನಾರಾಯಣ, ಬಾಕೂìರಿನ ರುಕ್ಮಿಣಿ ಶೆಡ್ತಿ ಸ್ಮಾರಕ ರಾಷ್ಟ್ರೀಯ ಕಾಲೇಜು, ಹೆಬ್ರಿ ಸರಕಾರಿ ಕಾಲೇಜು ಮತ್ತು ಮಂಗಳೂರಿನ ಕಾವೂರು ಸರಕಾರಿ ಪ್ರ.ದ. ಕಾಲೇಜುಗಳು “ಬಿ++’ ಗ್ರೇಡ್‌ ಪಡೆದಿವೆ. ಪುತ್ತೂರು ಬೆಟ್ಟಂಪಾಡಿ, ಉಪ್ಪಿನಂಗಡಿ, ಸುಳ್ಯ, ತೆಂಕನಿಡಿಯೂರು, ಪುಂಜಾಲಕಟ್ಟೆ, ಕುಂದಾಪುರ, ಮುಡಿಪು, ಬೆಳ್ಳಾರೆ, ಮತ್ತು ಪುತ್ತೂರು ಸರಕಾರಿ ಪ್ರ.ದ.ಕಾಲೇಜುಗಳು “ಬಿ+’ ಗ್ರೇಡ್‌ ಪಡೆದಿವೆ. ವಾಮದಪದವು, ಬೈಂದೂರು, ಉಡುಪಿ ಅಜ್ಜರಕಾಡು, ಕುಶಾಲನಗರ, ವೀರಾಜಪೇಟೆ, ಬೆಳ್ತಂಗಡಿ, ಕಾಪು ಪ್ರಥಮ ದರ್ಜೆ ಕಾಲೇಜುಗಳು “ಬಿ’ ಗ್ರೇಡ್‌ ಪಡೆದಿವೆ.

Advertisement

ಮಂಗಳೂರು ಪ್ರಾದೇಶಿಕ
ಕಚೇರಿ ವ್ಯಾಪ್ತಿಯ ದ.ಕ., ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ಈಗಾಗಲೇ 22 ಕಾಲೇಜುಗಳು ನ್ಯಾಕ್‌ ಮಾನ್ಯತೆ ಪಡೆದಿವೆ. 11 ಕಾಲೇಜುಗಳಿಗೆ ಶೀಘ್ರ ಮಾನ್ಯತೆ ಸಿಗಲಿದ್ದು, ಕೆಲವು ಮೊದಲ ಮೌಲ್ಯಾಂಕನದ ಮೊದಲ ಆವೃತ್ತಿ (ಫಸ್ಟ್‌ ಸೈಕಲ್‌) ಪೂರ್ಣ ಗೊಳಿಸಿ ಎರಡನೇ ಆವೃತ್ತಿಗೆ ಸಿದ್ಧವಾಗುತ್ತಿವೆ.
-ದೇವಿಪ್ರಸಾದ್‌, ನ್ಯಾಕ್‌ ವಿಶೇಷಾಧಿಕಾರಿ, ಮಂಗಳೂರು ಪ್ರಾದೇಶಿಕ ಕಚೇರಿ

-  ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next