ಬೆಂಗಳೂರು: ವೇತನ ಭತ್ಯೆ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಮಾ.1ರಿಂದ ಅನಿರ್ಧಿಷ್ಟಾವಧಿಯ ಮುಷ್ಕರಕ್ಕೆ ಮುಂದಾಗಿದ್ದು, ಮುಷ್ಕರದ ವೇಳೆ ಉಪವಾಸ, ಧರಣಿ ಸತ್ಯಾಗ್ರಹ ಹಾಗೂ ಘೋಷಣೆ ಕೂಗುವುದನ್ನು ನಿರ್ಬಂಧಿಸಲಾಗಿದೆ.
ಮುಷ್ಕರ ಯಶಸ್ವಿಗೊಳಿಸುವ ಸಂಬಂಧ ಸಂಘ ಸೋಮವಾರ ಮಾರ್ಗಸೂಚಿ ಪ್ರಕಟಿಸಿದೆ. ಶಾಂತಿಯುತ ಹೋರಾಟಕ್ಕೆ ಸೂಚನೆ ನೀಡಲಾಗಿದೆ. ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಯಾವುದೇ ಜನಪ್ರತಿನಿಧಿಗಳನ್ನು ಟೀಕಿಸದಂತೆ ತಾಕೀತು ಮಾಡಿದೆ.
ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತುರ್ತು ಸೇವೆಗಳ ಸಿಬ್ಬಂದಿ ಕಪ್ಪು ಬಟ್ಟೆ ಧರಿಸಿ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದೆ. ಉಳಿದಂತೆ ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಮುಷ್ಕರದಲ್ಲಿ ಭಾಗವಹಿಸುವಂತೆ ಸೂಚನೆ ನೀಡಿದೆ.
ಇಲಾಖೆಯ ಎಲ್ಲಾ ವೃಂದ ಸಂಘಗಳ ಅಧ್ಯಕ್ಷರು ತಮ್ಮ ಅಧೀನದಲ್ಲಿ ಬರುವ ಉಪ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅನಿರ್ಧಿಷ್ಟ ಅವಧಿಯ ಮುಷ್ಕರ ಯಶಸ್ವಿಗೊಳಿಸುವಂತೆ ಸಂಘ ಸೂಚನೆ ನೀಡಿದೆ. ಮಾ.1ರಿಂದ ಎಲ್ಲಾ ಇಲಾಖೆಗಳ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವಂತೆ ಸಂಘ ತಿಳಿಸಿದೆ.
ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಪಡಿಸುವುದರ ಜತೆಗೆ ಸಂಘ ಅನಿರ್ದಿಷ್ಟ ಸೂಚನೆ ನೀಡುವ ವರೆಗೆ ಮುಂದುವರಿಸುವಂತೆ ಸೂಚಿಸಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳು ಸರ್ಕಾರಿ ಕಚೇರಿ, ಶಾಲಾ-ಕಾಲೇಜು, ಆಸ್ಪತ್ರೆಗಳು ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಮನವೊಲಿಸಿ ಕರ್ತವ್ಯಕ್ಕೆ ಹಾಜರಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.
ಮುಷ್ಕರ ನಿರತ ಸಂದರ್ಭದಲ್ಲಿ ಸರ್ಕಾರವು ಮುಷ್ಕರವನ್ನು ಹತ್ತಿಕ್ಕಲು ಕಾನೂನು ಕ್ರಮಗಳ ಮೂಲಕ ಬೆದರಿಕೆ ಹಾಕಿದ್ದಲ್ಲಿ ಸರ್ಕಾರಿ ಸರ್ಕಾರಿ ನೌಕರರು ಎದೆಗುಂದಬಾರದು ಎಂದು ತಿಳಿಸಿದೆ.