ಮೈಸೂರು: ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಮರು ಜಾರಿ ಹಾಗೂ ವೇತನ ಪರಿಷ್ಕರಣೆಗೆ ಆಗ್ರಹಿಸಿ ಸರ್ಕಾರಿ ನೌಕರರು ಬುಧವಾರ ನಡೆಸಿದ ಮುಷ್ಕರದಿಂದ ಆರೋಗ್ಯ ಇಲಾಖೆಯ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಜಿಲ್ಲೆಯ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯ ಉಂಟಾಯಿತು.
ಸರ್ಕಾರಿ ನೌಕರರು ಬುಧವಾರ ಮಧ್ಯಾಹ್ನದವರೆಗೆ ನಡೆಸಿದ ಮುಷ್ಕರದಿಂದ ನಗರದ ಕೆ.ಆರ್.ಆಸ್ಪತ್ರೆ, ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನ್ಯಾಯಾಲಯ, ಜಿಲ್ಲಾಧಿಕಾರಿ ಕಚೇರಿ, ಮೈಸೂರು ಮಹಾನಗರ ಪಾಲಿಕೆಯ ಮುಖ್ಯ ಕಚೇರಿ ಹಾಗೂ ವಲಯ ಕಚೇರಿಗಳಲ್ಲಿ ಸರ್ಕಾರಿ ಸೇವೆ ಸಿಗದೆ ಸಾರ್ವಜನಿಕರು ಪರದಾಡಿದ ದೃಶ್ಯ ಕಂಡಬಂದಿತು.
ಬಣಗುಟ್ಟಿದ ಕಚೇರಿಗಳು: ಜಿಲ್ಲಾಧಿಕಾರಿ ಕಚೇರಿ, ಪಾಲಿಕೆ ಕಚೇರಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗಳು ಸೇರಿದಂತೆ ಸರ್ಕಾರಿ ಕಚೇರಿಗಳು ಜನರಿಲ್ಲದೇ ಬಣಗುಟ್ಟಿದವು. ಖಾತೆ ಬದಲಾವಣೆ, ಜಾತಿ ಪ್ರಮಾಣ ಪತ್ರ ಸೇರಿದಂತೆ ವಿವಿಧ ಅರ್ಜಿ ಸಲ್ಲಿಸಲು ಪಾಲಿಕೆ ಮುಖ್ಯ ಕಚೇರಿಗೆ ಬಂದಿದ್ದವರು ವಾಪಸ್ ತೆರಳಿದರು. ಹಾಗೆಯೇ ನಿತ್ಯ ನೂರಾರು ಮಂದಿಯಿಂದ ತುಂಬಿರುತ್ತಿದ್ದ ಜಿಲ್ಲಾಧಿಕಾರಿ ಕಚೇರಿಯೂ ಸಿಬ್ಬಂದಿ ಇಲ್ಲದೇ ಬಣಗುಟ್ಟಿದರೆ, ತಮ್ಮ ಸಮಸ್ಯೆ ಪರಿಹರಿಸಿಕೊಳ್ಳಲು ಅರ್ಜಿ ಹಿಡಿದು ಬಂದಿದ್ದ ಸಾರ್ವಜನಿಕರು ನಿರಾಸೆಯಿಂದ ಮನೆಯತ್ತ ತೆರಳಿದರು. ಮೈಸೂರು ಪಾಲಿಕೆ ನೌಕರರ ಸಂಘದ ಸದಸ್ಯರು, ಮೈಸೂರು ವಿಶ್ವವಿದ್ಯಾಲಯ ನೌಕರರ ಸಂಘದವರು ಮುಷ್ಕರಕ್ಕೆ ಬೆಂಬಲ ನೀಡಿದರು.
ಆಸ್ಪತ್ರೆಗಳೂ ಖಾಲಿ ಖಾಲಿ: ಹೊರರೋಗಿಗಳಿಂದ ಗಿಜಿಗುಡುತ್ತಿದ್ದ ನಗರದ ಕೆ.ಆರ್. ಆಸ್ಪತ್ರೆ, ಜಿಲ್ಲಾಸ್ಪತ್ರೆ, ಜಯನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಮುಷ್ಕರ ಹಿನ್ನೆಲೆ ಆರೋಗ್ಯ ಸೇವೆ ವ್ಯತ್ಯಯವಾಗಿತ್ತು. ಹೆರಿಗೆ ಆಸ್ಪತ್ರೆಯಲ್ಲಿ ರೋಗಿಗಳನ್ನು ಮಂಗಳವಾರದಿಂದಲೇ ದಾಖಲಿಸಿಕೊಂಡಿರಲಿಲ್ಲ. ಕೆ.ಆರ್.ಆಸ್ಪತ್ರೆಯ ಒಪಿಡಿ ಬಂದ್ ಹಿನ್ನೆಲೆ ಚಿಕಿತ್ಸೆ ಲಭ್ಯವಾಗದೇ ರೋಗಿಗಳು ಸಂಕಷ್ಟಕ್ಕೀಡಾದರು. ರಕ್ತದೊತ್ತಡ, ಮಧುಮೇಹ ಪರೀಕ್ಷೆಗೆಂದು ಬಂದವರು ಖಾಸಗಿ ಆಸ್ಪತ್ರೆಗಳಿಗೆ ತೆರಳಿದರು.
ನೌಕರರ ಬೇಡಿಕೆ ಈಡೀರಿಸುವ ಸಂಬಂಧ ಸರ್ಕಾರ ಭವಸೆ ನೀಡಿದ ಹಿನ್ನೆಲೆ ಮಧ್ಯಾಹ್ನಕ್ಕೆ ಮುಷ್ಕರ ವಾಪಾಸ್ ಪಡೆದಿದ್ದರಿಂದ ಮಧ್ಯಾಹ್ನದಿಂದಲೇ ಎಲ್ಲಾ ಸರ್ಕಾರಿ ಕಚೇರಿ, ಆಸ್ಪತ್ರೆಗಳಲ್ಲಿ ಸೇವೆ ಪುನಾರಂಭವಾಯಿತು.