ಕಲಬುರಗಿ: ವಿದ್ಯಾರ್ಥಿಗಳ ಅಪೌಷ್ಟಿಕತೆ ನಿವಾರಣೆಗಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಧ್ಯಾಹ್ನದ ಬಿಸಿಯೂಟದ ಜತೆಗೆ ಬಾಳೆಹಣ್ಣು ಮತ್ತು ಮೊಟ್ಟೆ ವಿತರಿಸುವ ಸರ್ಕಾರದ ಕ್ರಮವನ್ನು ಸಾಮೂಹಿಕ ಸಂಘಟನೆಗಳ ವಿಭಾಗೀಯ ವೇದಿಕೆ ಸ್ವಾಗತಿಸುತ್ತಿದ್ದು, ಮೊಟ್ಟೆ ವಿತರಣೆ ಕುರಿತ ವಿರೋಧಕ್ಕೆ ಸರ್ಕಾರಮಣಿಬಾರದು ಎಂದು ಒತ್ತಾಯಿಸಿದೆ.
ನಗರದ ಸಿಪಿಐ (ಎಂ) ಪಕ್ಷದ ಕಚೇರಿಯಲ್ಲಿ ನಡೆದ ಸಾಮೂಹಿಕ ಸಂಘಟನೆಗಳ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದ ಪ್ರಮುಖರು, ವಾರದಲ್ಲಿ ಮೂರು ದಿನಗಳ ಕಾಲ ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸುವ ಬಗ್ಗೆ ಕೆಲ ಮಠಗಳ ಸ್ವಾಮೀಜಿಗಳು ಜಾತಿ ಮತ್ತು ಧಾರ್ಮಿಕತೆ ನಂಬಿಕೆ ಹೆಸರಿನಲ್ಲಿ ಸರ್ಕಾರದ ಆದೇಶವನ್ನು ವಾಪಸ್ ಪಡೆಯಬೇಕೆಂದು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕುತ್ತಿರುವುದು ಸರಿಯಲ್ಲ ಎಂದರು.
ರಾಜ್ಯದ ಅತಿ ಹಿಂದುಳಿದಪ್ರದೇಶವಾದ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮಕ್ಕಳ ಅಪೌಷ್ಟಿಕತೆ, ರಕ್ತ ಹೀನತೆ ಪ್ರಮಾಣ ಅಧಿಕವಾಗಿದೆ. ಯಾದಗಿರಿ-ಶೇ.74, ಕಲಬುರಗಿ-ಶೇ.72.4,ಬಳ್ಳಾರಿ-ಶೇ.72.3, ಕೊಪ್ಪಳ- ಶೇ.70.7, ಶೇ.70.6, ಬೀದರ್- ಶೇ.69.1 ಮತ್ತು ಪಕದ್ಕ ವಿಜಯಪುರದಲ್ಲಿ ಶೇ.68ರಷ್ಟು ಅಪೌಷ್ಟಿಕ ಮಕ್ಕಳು ಇದ್ದಾರೆ. ಗಾಬರಿಗೊಳಿಸುವ ಮತ್ತು ಚಿಂತೆಯಸಂ ಗತಿ ಇದಾಗಿದೆ. ಅಪೌಷ್ಟಿಕತೆ ನಿವಾರಣೆ ಮಾಡುವ ದಿಕ್ಕಿನಲ್ಲಿ ಆಲೋಚನೆ ಮಾಡುವುದನ್ನು ಬಿಟ್ಟು ಮಕಳ್ಕ ತಟ್ಟೆಯಿಂದ ಅನ್ನ ಕಿತ್ತುಕೊಳ್ಳುವುದು ಕಾನೂನಾತ್ಮಕವಾಗಿಯೂ ಅಪರಾಧವಾಗಿದೆ ಎಂದು ಟೀಕಿಸಿದರು.
ಮಕ್ಕಳು ಅಪೌಷ್ಟಿಕತೆ ಮತ್ತು ರಕ್ತ ಹೀನತೆಯಿಂದ ಬಳಲುತ್ತಿರುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಮಿಕ್ಷಾ ವರದಿ ಹಿನ್ನೆಲೆಯಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಮಾಡಲಾಗುತ್ತಿದೆ. ಮೊಟ್ಟೆ ತಿನ್ನುವುದು ಹಾಗೂ ತಿನ್ನದಿರುವುದು ಮಕ್ಕಳ ಆಯ್ಕೆಯಾಗಿರುತ್ತದೆ. ಇದನ್ನೇ ತಿನ್ನಬೇಕು, ಇದನ್ನೇ ತಿನ್ನಬಾರದೆಂದು ಹೇಳುವುದು ಆಹಾರದ ಹಕ್ಕಿನ ಮೇಲೆ ದಾಳಿ ಮಾಡಿದಂತೆ ಆಗುತ್ತದೆ ಎಂದು ಹೋರಾಟಗಾರ್ತಿ ಕೆ.ನೀಲಾ ಹೇಳಿದರು.
ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ನಂತರ ಇದೇ ತಿಂಗಳಲ್ಲಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯಲ್ಲಿ ಶೇ.10ರಿಂದ 12ರಷ್ಟು ಏರಿಕೆ ಕಂಡು ಬಂದಿದೆ. ಅಲ್ಲದೇ, ಶೇ.80ರಷ್ಟು ಮಕ್ಕಳು ಮೊಟ್ಟೆ ಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಉಳಿದ ಮಕ್ಕಳಿಗೆ ಬಾಳೆಹಣ್ಣು ವಿತರಣೆ ಮಾಡುವುದರಿಂದ ಯಾವುದೇ ವಿದ್ಯಾರ್ಥಿಗಳಿಗೆ ಭೇದಭಾವ, ತಾರತಮ್ಯ ಮಾಡುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂಬುದನ್ನು ಸ್ವಾಮೀಜಿಗಳು ಅರ್ಥ ಮಾಡಿಕೊಳ್ಳಲಿ ಎಂದು ಹೋರಾಟಗಾರ ಶರಣಬಸಪ್ಪ ಮಮಶೆಟ್ಟಿ ತಿಳಿಸಿದರು.
ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ವಿವಿಧ ಜಾತಿ-ಧರ್ಮದ ತುಳಿತಕ್ಕೆ ಒಳಗಾದ ಸಮುದಾಯದ, ಬಡವರ, ಹಿಂದುಳಿದ ವರ್ಗ ಸಮುದಾಯದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅಪೌಷ್ಟಿಕತೆ ನಿವಾರಣೆಗಾಗಿ ರಾಜ್ಯದ ಶಾಲೆಗಳಲ್ಲೂ ಪ್ರೌಢ ಶಿಕ್ಷಣ ಮಕ್ಕಳಿಗೂ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಯೋಜನೆ ವಿಸ್ತರಿಸಬೇಕೆಂದು ಆಗ್ರಹಿಸಿದ್ದಾರೆ.
ಸಭೆಯಲ್ಲಿ ಪ್ರಮುಖರಾದ ಚನ್ನಪ್ಪ ಆನೆಗುಂದಿ, ಪ್ರಭು ಖಾನಾಪುರೆ, ಎಸ್. ಎಂ.ಸಾಗರ, ಗಂಗಮ್ಮ ಕಟ್ಟಿಮನಿ, ಮಲ್ಲಣ್ಣ ಬಿರಾದಾರ, ಗುಲಾಂಸಾಬ್ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.