Advertisement
ಎರಡನೇ ಅಲೆ ತೀವ್ರಗೊಂಡಿರುವ ಈ ಸಂದರ್ಭದಲ್ಲಿಯೇ 50 ಸಾವಿರದಷ್ಟು ಸೋಂಕು ಪರೀಕ್ಷೆಗಳನ್ನು ಕಡಿಮೆ ಮಾಡಿದೆ. ಈ ಮೂಲಕ ಪರೋಕ್ಷವಾಗಿ ಹೊಸ ಸೋಂಕು ಪ್ರಕರಣಗಳನ್ನು ಇಳಿಕೆಗೆ ಮುಂದಾದಂತಿದೆ. ಸರ್ಕಾರದ ಈ ನಡೆಗೆ ಆರೋಗ್ಯ ತಜ್ಞರು ಕೂಡಾ ಬೇಸರ ವ್ಯಕ್ತಪಡಿಸಿದ್ದು, ಪರೀಕ್ಷೆ ಇಳಿಕೆಯಾದರೆ ಸೋಂಕು ಹತೋಟಿ ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
Related Articles
Advertisement
ಎರಡರಿಂದ ಒಂದೂವರೆ ಲಕ್ಷಕ್ಕೆ ತಗ್ಗಿದ ಪರೀಕ್ಷೆ: ಮೊದಲ ಅಲೆಯ ಹತ್ತಿಕ್ಕಿದ್ದ ತಂತ್ರವನ್ನು ಈ ಬಾರಿ ರಾಜ್ಯ ಸರ್ಕಾರ ಮರೆತಿದ್ದು, ಕಳೆದ ವಾರ ಹೆಚ್ಚು ಕಡಿಮೆ ಎರಡು ಲಕ್ಷ ಗಡಿಯಲ್ಲಿ ಪರೀಕ್ಷೆಗಳು ಈಗ ಒಂದೂವರೆ ಲಕ್ಷಕ್ಕೆ ತಗ್ಗಿವೆ. ಏ.30 ರಂದು 1.9 ಲಕ್ಷ ನಡೆದಿದ್ದ ಸೋಂಕು ಪರೀಕ್ಷೆಗಳು ಕಳೆದ ಐದು ದಿನಗಳಿಂದ ನಿತ್ಯ 8 ರಿಂದ 10 ಸಾವಿರ ಇಳಿಕೆಯಾಗುತ್ತಾ ಸಾಗಿ ಸದ್ಯ 1.4 ಲಕ್ಷಕ್ಕೆ ಬಂದು ನಿಂತಿವೆ. ಅದರಲ್ಲೂ ಸೋಂಕು ಹೆಚ್ಚಿರುವ ಬೆಂಗಳೂರಿನಲ್ಲಿ ಪರೀಕ್ಷೆಗಳ ಸಂಖ್ಯೆ ಒಂದು ಲಕ್ಷದಿಂದ 40 ಸಾವಿರಕ್ಕೆ ಇಳಿಕೆಯಾಗಿವೆ.
ಸರ್ಕಾರದಿಂದಲೇ ಸೂಚನೆ?: ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಒಬ್ಬ ಸೋಂಕಿತನ ಕನಿಷ್ಠ 20 ಸಂಪರ್ಕಿತರ ಪರೀಕ್ಷೆ ನಡೆಸಬೇಕು. ಆದರೆ, ಐದಕ್ಕಿಂತಲೂ ಕಡಿಮೆ ಸಂಪರ್ಕಿತರ ಪರೀಕ್ಷೆ ನಡೆಯುತ್ತಿದೆ. ಇದು ಕೂಡಾ ಪರೀಕ್ಷೆ ತಗ್ಗಲು ಕಾರಣವಾಗಿದೆ. ಈ ಕುರಿತು ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಏಪ್ರಿಲ್ ಮೂರನೇ ವಾರದಲ್ಲಿ ಪರೀಕ್ಷೆ ಹೆಚ್ಚಿಸಲು ಸೂಚಿಸಿದ್ದರು. ಒಂದು ವಾರದಿಂದ ಪರೀಕ್ಷೆ ಕಡಿಮೆಗೆ ಸೂಚನೆ ಬಂದಿದೆ ಎನ್ನುತ್ತಾರೆ. ಇರೋ ಸೋಂಕಿತರಿಗೆ ಚಿಕಿತ್ಸೆ, ಆರೈಕೆ ಸಾಧ್ಯವಾಗುತ್ತಿಲ್ಲ. ಪರೀಕ್ಷೆ ಹೆಚ್ಚಿಸಿ ಇನ್ನಷ್ಟು ಸೋಂಕಿತರ ಹೆಚ್ಚಾದರೆ ನಿಭಾಹಿಸುವುದು ಕಷ್ಟವಾಗ ಬಹುದು ಎಂಬ ಲೆಕ್ಕಾಚಾರ ಸರ್ಕಾರದ ಬಳಿ ಇರಬಹುದು. ಆದರೆ, ಇದು ಸಮಂಜಸವಲ್ಲ ಎಂಬ ಅಭಿಪ್ರಾಯವನ್ನು ಕೆಲ ವೈದ್ಯರು ವ್ಯಕ್ತಪಡಿಸಿದ್ದಾರೆ.
ಪರೀಕ್ಷೆ ತಗ್ಗಿದರೂ, ಹೊಸ ಪ್ರಕರಣಗಳು ಕುಗ್ಗಲಿಲ್ಲ: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ನಿತ್ಯ 10 ಸಾವಿರದಂತೆ 50 ಸಾವಿರ ಪರೀಕ್ಷೆ ಕಡಿಮೆ ಮಾಡುತ್ತಾ ಬಂದರೂ ಹೊಸ ಪ್ರಕರಣಗಳು ಮಾತ್ರ ನಲವತ್ತು ಸಾವಿರ ಆಸುಪಾಸಿನಲ್ಲಿಯೇ ಇವೆ. ಈ ಮೂಲಕ ಪರೀಕ್ಷೆ ಕಡಿಮೆ ಮಾಡಿ ಪ್ರಕರಣಗಳನ್ನು ಕಡಿಮೆ ಮಾಡಬಹುದು ಎಂಬ ಸರ್ಕಾರದ ಆಲೋಚನೆ ಹಿನ್ನಡೆಯಾಗಿದೆ. ಸೋಂಕು ಕಳೆದ ಬಾರಿಗಿಂತ ದುಪ್ಪಟ್ಟಾಗಿದ್ದು, ಪರೀಕ್ಷೆಯೂ ದುಪ್ಪಟ್ಟಾಗಬೇಕು. ಈ ಕುರಿತು ಸರ್ಕಾರ ಕ್ರಮಕೈಗೊಂಡರೇ ಸೋಂಕು ಹತೋಟಿ ಸಾಧ್ಯ ಎಂದು ತಜ್ಞರು ತಿಳಿಸಿದ್ದಾರೆ.
4 ಲಕ್ಷ ಪರೀಕ್ಷೆ ಮಾಡಬೇಕು
ಸೋಂಕು ಪ್ರಕರಣಗಳು 40 ಸಾವಿರಕ್ಕೆ ಹೆಚ್ಚಿದ್ದು, ನಿತ್ಯ ನಾಲ್ಕು ಲಕ್ಷ ಪರೀಕ್ಷೆಗಳನ್ನು ನಡೆಸಬೇಕು. ಆದರೆ, ಅಷ್ಟೋಂದು ಪ್ರಯೋಗಾಲಯಗಳು ಇಲ್ಲ. ಹೀಗಾಗಿ, ರ್ಯಾಪಿಡ್ ಪರೀಕ್ಷೆಗಳಿಗೆ ಆದ್ಯತೆ ನೀಡ ಬೇಕು. ಹೆಚ್ಚು ರ್ಯಾಪಿಡ್ ಕಿಟ್‌ಗಳನ್ನು ತರಿಸಿಕೊಂಡ ಸೋಂಕು ಲಕ್ಷಣ ಇದ್ದವರಿಗೆ ಪರೀಕ್ಷೆ ಮಾಡಿ ಶೀಘ್ರ ಕ್ವಾರಂಟೈನ್ ಅಥವಾ ಚಿಕಿತ್ಸೆಗೆ ಸೂಚಿಸಬೇಕು ಎಂದು ವೈರಾಣು ತಜ್ಞ ಡಾ.ವಿ.ರವಿ ತಿಳಿಸಿದ್ದಾರೆ.
ಸೋಂಕು ಹತೋಟಿಗೆ ಸರ್ಕಾರದ ಮುಂದೆ ಸದ್ಯ ಇರುವ ಮಾರ್ಗ ಅತಿಹೆಚ್ಚು ಪರೀಕ್ಷೆ ಮಾಡುವುದಾಗಿದೆ. ರಾಜ್ಯದಲ್ಲಿ ಗರಿಷ್ಠ ಪ್ರಮಾಣದಲ್ಲಿ ಪರೀಕ್ಷೆ ನಡೆಸಬೇಕು. ಪರೀಕ್ಷೆ ಪ್ರಮಾಣ ಇಳಿಕೆಯು ಸೋಂಕು ಹರಡುವಿಕೆ ಹಾದಿಯಾಗುತ್ತದೆ.
–ಡಾ.ಸುದರ್ಶನ್ ಬಲ್ಲಾಳ್, ತಜ್ಞರ ಸಲಹಾ ಸಮಿತಿ ಸದಸ್ಯರು, ಅಧ್ಯಕ್ಷರು ಮಣಿಪಾಲ್ ಆಸ್ಪತ್ರೆ
ಜಯಪ್ರಕಾಶ್ ಬಿರಾದಾರ್