ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿರುದ್ಧ ಎಷ್ಟೇ ಆರೋಪಗಳು ಕೇಳಿ ಬಂದರೂ ಕೂಡ ಅಭಿಮಾನಿಗಳ ಪ್ರೀತಿ-ಗೌರವಕ್ಕೆ ಧಕ್ಕೆ ಬರುವುದಿಲ್ಲ ಎಂಬುದಕ್ಕೆ ಇಂದು (ಜುಲೈ 21) ನಡೆದ ಘಟನೆಯೊಂದು ಸಾಕ್ಷಿಯಾಗಿದೆ.
ಡಿ ಬಾಸ್ ಅವರನ್ನು ನೋಡಿದ ಸರ್ಕಾರಿ ಬಸ್ ಚಾಲಕನೋರ್ವ ಬಸ್ ನಿಲ್ಲಿಸಿ ತಮ್ಮ ನೆಚ್ಚಿನ ನಟನ ಜೊತೆಗಿನ ಕ್ಷಣಗಳನ್ನು ವಿಡಿಯೋ ಮಾಡಿಕೊಂಡಿದ್ದಾನೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಇನ್ನು ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ದರ್ಶನ್ ಅವರ ವಿರುದ್ಧ ಕೇಳಿ ಬಂದಿದೆ. ದಲಿತ ಕೆಲಸಗಾರನ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆ ಎಂದು ಪತ್ರಕರ್ತ ಹಾಗೂ ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಆರೋಪಿಸಿದ್ದಾರೆ. ಈ ವಿಚಾರವಾಗಿ ದರ್ಶನ್ ಹಾಗೂ ಲಂಕೇಶ್ ವಿರುದ್ಧ ವಾಕ್ಸಮರ ಕೂಡ ನಡೆದಿದೆ. ಇತ್ತ ದರ್ಶನ್ ಅವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ 25 ಕೋಟಿ ರೂ ಸಾಲಕ್ಕೆ ಶ್ಯೂರಿಟಿ ಪ್ರಕರಣ ಕೂಡ ಬೆಳಕಿಗೆ ಬಂದಿದೆ.
ಪದೆ ಪದೇ ದರ್ಶನ್ ಅವರ ಸುತ್ತ ಕೇಳಿ ಬರುತ್ತಿರುವ ವಿವಾದಗಳು ಅಭಿಮಾನಿಗಳನ್ನು ಕೆರಳಿಸಿದೆ. ತಮ್ಮ ನೆಚ್ಚಿನ ನಟನ ವಿರುದ್ಧ ಷಡ್ಯಂತ್ರ ನಡೆಸುತ್ತಿರುವವರ ವಿರುದ್ಧ ಡಿ ಬಾಸ್ ಫ್ಯಾನ್ಸ್ ಹರಿಹಾಯುತ್ತಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ಎನ್ನುವ ಅಭಿಯಾನ ಕೂಡ ಶುರುವಾಗಿದೆ.