ಹೊಸದಿಲ್ಲಿ : ಕೇಂದ್ರ ಸರಕಾರ ಇಂದು ಕೇಂದ್ರ ಸಾರ್ವಜನಿಕ ರಂಗದ ಉದ್ಯಮಗಳಿಗಾಗಿ ರೂಪಿಸಲಾಗಿರುವ ನೀತಿ ಚೌಕಟ್ಟಿಗೆ ಅನುಮೋದನೆ ನೀಡಿತು. ಇದರ ಪರಿಣಾಮವಾಗಿ ಈಗಿನ್ನು ಈ ಉದ್ಯಮಗಳಲ್ಲಿ ದುಡಿಯುವ ಕಾರ್ಮಿಕ ವೇತನ ಪರಿಷ್ಕರಣೆ ಸಂಬಂಧದ ಮುಂದಿನ ಹಂತದ ಮಾತುಕತೆಗೆ ವೇದಿಕೆ ಸಿದ್ಧವಾದಂತಾಗಿದೆ.
ಸರಕಾರದ ಈ ಕ್ರಮದಿಂದ ಕೇಂದ್ರ ಸಾರ್ವಜನಿಕ ಉದ್ಯಮ ರಂಗದಲ್ಲಿ ದುಡಿಯುತ್ತಿರುವ ಕಾರ್ಮಿಕ ಸಂಘಗಳ ಸುಮಾರು 9.35 ಲಕ್ಷ ಕೆಲಸಗಾರರಿಗೆ ಅನುಕೂಲವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಉದ್ಯಮಗಳ ಕಾರ್ಮಿಕರ ವೇತನ ನೀತಿಗೆ ಅನುಮೋದನೆ ನೀಡಲಾಯಿತು.
ಕೇಂದ್ರ ಸರಕಾರದ ಸುಮಾರು 320 ಉದ್ಯಮ ಸಂಸ್ಥೆಗಳಲ್ಲಿ 12.34 ಲಕ್ಷ ಕಾರ್ಮಿಕರು ದುಡಿಯುತ್ತಿದ್ದು ಈಪೈಕಿ 2.99 ಲಕ್ಷ ಕಾರ್ಮಿಕರು ಬೋರ್ಡ್ ಮಟ್ಟದವರಾಗಿದ್ದಾರೆ ಮತ್ತು ಉಳಿದವರು ಬೋರ್ಡ್ ಕೆಳಮಟ್ಟದ ಕಾರ್ಯ ನಿರ್ವಾಹಕರು ಮತ್ತು ಅಸಂಘಟಿತ ಮೇಲುಸ್ತುವಾರಿದಾರರಾಗಿದ್ದಾರೆ.