ಹೊಸದಿಲ್ಲಿ: ರಾಜ್ಯಕ್ಕೆ ಕೇಂದ್ರ ಸರಕಾರ ಮತ್ತೊಂದು ಸಿಹಿ ಸುದ್ದಿ ನೀಡಿದ್ದು, ಮೂರನೇ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್ ಸ್ಥಾಪಿಸುವುದಕ್ಕೆ ಅನುಮತಿ ನೀಡಿದೆ.
ಈ ಕುರಿತು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ ಶುಕ್ರವಾರ ಮಾಹಿತಿ ನೀಡಿ, ಧಾರವಾಡ ಜಿಲ್ಲೆಯಲ್ಲಿ ಈ ಕ್ಲಸ್ಟರ್ ಸ್ಥಾಪನೆಯಾಗಲಿದೆ ಎಂದು ಘೋಷಿಸಿದ್ದಾರೆ.
ಈ ಮೂಲಕ ರಾಜ್ಯದಲ್ಲಿ 1,903 ಕೋಟಿ ರೂ. ವೆಚ್ಚದಲ್ಲಿ, 1,337 ಎಕರೆ ವ್ಯಾಪ್ತಿಯಲ್ಲಿ ಮೂರು ಇಎಂಸಿ (ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್)ಗಳು ತಲೆಎತ್ತಲಿವೆ. ಒಟ್ಟಾರೆ ಯೋಜನಾ ವೆಚ್ಚದ ಪೈಕಿ 889 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಭರಿಸಲಿದೆ.
ಹುಬ್ಬಳ್ಳಿ ಧಾರವಾಡದಲ್ಲೂ ಹೊಸ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್‌ಗೆ ಸರಕಾರ ಅನುಮತಿ ನೀಡಿರುವ ಕಾರಣ, ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಕರ್ನಾಟಕದ ನಾಯಕತ್ವಕ್ಕೆ ಮತ್ತಷ್ಟು ಪುಷ್ಟಿ ಸಿಗಲಿದೆ. ಕೋಟೂರ ಮತ್ತು ಬೇಲೂರಾ ಗ್ರಾಮದಲ್ಲಿ ಕ್ರಮವಾಗಿ 88.48 ಮತ್ತು 136.02 ಎಕರೆ ಪ್ರದೇಶದಲ್ಲಿ ಇಎಂಸಿ ವ್ಯಾಪಿಸಿರಲಿದೆ ಎಂದು ಸಚಿವ ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.