ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಕುಟುಂಬಸ್ಥರಿಗೆ ಸೇರಿದ ಹೆಚ್ಚುವರಿ ಆಸ್ತಿ ಜಪ್ತಿ ಪ್ರಕ್ರಿಯೆಗೆ ಸರ್ಕಾರ ಅನುಮತಿ ನೀಡಿದೆ.
ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಕುಟುಂಬದ ಸದಸ್ಯರ ಹೆಚ್ಚುವರಿ ಆಸ್ತಿಗಳನ್ನು ಜಪ್ತಿ ಮಾಡಲು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅನುಮತಿ ಕೋರಿ ಸಲ್ಲಿಸಿರುವ ಮನವಿಯನ್ನು ಪರಿಗಣಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸಿಬಿಐ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.
ಅರ್ಜಿಯು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈ ವೇಳೆ ಸರ್ಕಾರದ ಪರ ವಕೀಲರು, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಿಬಿಐ ವಿಶೇಷ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿ ಗೃಹ ಇಲಾಖೆ ಹೊರಡಿಸಿರುವ ಆದೇಶದ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ಇದನ್ನೂ ಓದಿ:ಕೋಲಾರದಲ್ಲಿ ಸಿದ್ದರಾಮಯ್ಯ ಮೊದಲು ಸ್ಪರ್ಧಿಸಲಿ, ಆಮೇಲೆ ಸೋಲು ಗೆಲುವು: ಈಶ್ವರಪ್ಪ ಟೀಕೆ
ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸಿಬಿಐ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿತು.
ಆಗಸ್ಟ್ ತಿಂಗಳಿನಲ್ಲೇ ಸಿಬಿಐ ಅರ್ಜಿ ಸಲ್ಲಿಸಿತ್ತು. ತೆಲಂಗಾಣ, ಆಂಧ್ರ ಪ್ರದೇಶದಲ್ಲಿನ ಆಸ್ತಿಜಪ್ತಿಗೆ ಅನುಮತಿ ಕೇಳಿತ್ತು. ಸರ್ಕಾರದ ವಿಳಂಬ ಹಿನ್ನೆಲೆಯಲ್ಲಿ ಸಿಬಿಐ ಹೈಕೋರ್ಟ್ ಗೆ ಮೊರೆ ಹೋಗಿತ್ತು.
ಸಿಬಿಐ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು.