ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕರಿಗೆ 8 ತಿಂಗಳಾದರೂ ಸರ್ಕಾರ ವಸತಿ ಗೃಹ ಹಂಚಿಕೆ ಮಾಡದಿರುವ ಬಗ್ಗೆ ಆರ್.ಅಶೋಕ್ ಬೇಸರ ವ್ಯಕ್ತಪಡಿಸಿದ್ದಾರೆ.
2023ರ ನ.23 ರಂದು ಅಂದಿನ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಪತ್ರ ಬರೆದಿದ್ದ ಅಶೋಕ್, ಕುಮಾರಕೃಪ ಪೂರ್ವ ನಂ.1, ರೇಸ್‌ವ್ಯೂ ಕಾಟೇಜ್ ನಂ.1 ಅಥವಾ ರೇಸ್‌ವ್ಯೂ ಕಾಟೇಜ್ ನಂ.2 ನಲ್ಲಿ ಯಾವುದಾದರೊಂದಿಗೆ ವಸತಿ ಗೃಹವನ್ನು ತಮಗೆ ಹಂಚಿಕೆ ಮಾಡುವಂತೆ ಕೋರಿದ್ದರು.
ಸರ್ಕಾರದಿಂದ ವಸತಿ ಗೃಹ ಹಂಚಿಕೆ ಬಗ್ಗೆ ಯಾವುದೇ ಉತ್ತರ ಸಿಗದೇ ಇದ್ದರಿಂದ 2024 ರ ಫೆ.25 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೇ ಪತ್ರ ಬರೆದಿದ್ದ ಅಶೋಕ್, ಬಿಜೆಪಿಯ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಕೃಮಾರಕೃಪ ನಂ.1ನ್ನು ಅಂದಿನ ವಿಧಾನಸಭಾಧ್ಯಕ್ಷರಿಗೆ ಹಂಚಿಕೆ ಮಾಡಲಾಗಿತ್ತು. ಆದರೆ ಅಂದಿನ ವಿರೋಧ ಪಕ್ಷದ ನಾಯಕರು ಅದೇ ವಸತಿಗೃಹ ಬೇಕೆಂದು ಬೇಡಿಕೆ ಇಟ್ಟಾಗ ಸಚಿವನಾಗಿದ್ದ ನಾನು ರೇಸ್‌ವ್ಯೂ ಕಾಟೇಜ್ ನಂ.2 ವಸತಿ ಗೃಹವನ್ನು ಸಭಾಧ್ಯಕ್ಷರಿಗೆ ಬಿಟ್ಟುಕೊಟ್ಟಿದೆ ಎಂದು ನೆನಪು ಮಾಡಿಕೊಟ್ಟಿದ್ದಾರೆ.
ಈ ಎಲ್ಲ ಹಿನ್ನೆಲೆಯಲ್ಲಿ ಕುಮಾರಕೃಪ ಪೂರ್ವ ನಂ.1, ರೇಸ್‌ವ್ಯೂ ಕಾಟೇಜ್ ನಂ.1 ಅಥವಾ ರೇಸ್‌ವ್ಯೂ ಕಾಟೇಜ್ ನಂ.2 ನಲ್ಲಿ ಯಾವುದಾದರೊಂದಿಗೆ ವಸತಿ ಗೃಹವನ್ನು ತಮಗೆ ಹಂಚಿಕೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲೂ ಕೋರಿಕೆ ಸಲ್ಲಿಸಿದ್ದಾರೆ. ಆದರೂ ಇದುವರೆಗೆ ವಸತಿ ಗೃಹ ಹಂಚಿಕೆ ಮಾಡದಿರುವುದಕ್ಕೆ ವಿಪಕ್ಷ ನಾಯಕ ಅಶೋಕ, ಬೇಸರ ಹೊರಹಾಕಿದ್ದಾರೆ.
ಅಶೋಕ್‌ಗೆ ವಸತಿ ಗೃಹ ಕೊಡಿಸೋಣ ಅದಕ್ಕೇನಂತೆ: ಡಿ.ಕೆ.ಶಿವಕುಮಾರ್
ವಿಧಾನಸಭೆ ವಿಪಕ್ಷ ನಾಯಕರಿಗೇ ಸರಕಾರಿ ವಸತಿ ಗೃಹ ಸಿಕ್ಕಲ್ಲವೇ? ಕೊಡಿಸೋಣ ಅದಕ್ಕೇನಂತೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಅವರೀಗ ನೀವಿರುವ ಮನೆಯನ್ನೇ ಕೇಳುತ್ತಿದ್ದಾರೆ, ಅದು ಸಿಎಂ ಆಗುವ ಅದೃಷ್ಟದ ಮನೆಯಂತೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಾನು ಈಗಿರುವ ಮನೆ ಬಂಗಾರಪ್ಪ ಅವರು ಮುಖ್ಯಮಂತ್ರಿ ಇದ್ದಾಗ ಇಟ್ಟುಕೊಂಡಿದ್ದ ಮನೆ. ನಾನು ಅಲ್ಲಿನ ಮರದಡಿ ಕುಳಿತ ನೆನಪು ಸಾಕಷ್ಟಿದೆ. ಹಾಗಾಗಿ ಆ ಮನೆಯನ್ನು ತೆಗೆದುಕೊಂಡಿದ್ದೇನೆ. ಅಶೋಕ್ ಅವರು ಮುಖ್ಯಮಂತ್ರಿಯಾಗಲಿ, ಆ ಮನೆಯನ್ನೇ ಬಿಟ್ಟುಕೊಡುತ್ತೇನೆ ಎಂದು ಚಟಾಕಿ ಹಾರಿಸಿದರು.