ಹುಬ್ಬಳ್ಳಿ: ರಾಜ್ಯ ಸರಕಾರಕ್ಕೆ ಧೈರ್ಯವಿದ್ದರೆ ವಿಧಾನ ಪರಿಷತ್ ಸದಸ್ಯರಿಗೆ ಸೇರಿದ್ದೆನ್ನಲಾದ ಗೋವಿಂದರಾಜು ಹಾಗೂ ಲೆಹರ್ ಸಿಂಗ್ ಅವರ ಡೈರಿಗಳನ್ನು ಸಿಬಿಐಗೆ ಒಪ್ಪಿಸಲಿ. ಆಗ ಸತ್ಯ ಹೊರಬರಲಿದ್ದು, ಅನೇಕ ಸಚಿವರ ಬಂಡವಾಳವೂ ಬಯಲಾಗಲಿದೆ ಎಂದು ವಿಧಾನಸಭೆಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಗೆ ಕಪ್ಪ ಸಲ್ಲಿಕೆ ಬಗ್ಗೆ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಡೈರಿಯಿಂದ ಬಯಲಾಗಿದ್ದರಿಂದ ಗೊಂದಲ ಸೃಷ್ಟಿಸಲು ಕಾಂಗ್ರೆಸ್‌ನವರು ಲೆಹರ್ ಸಿಂಗ್ ಅವರ ಹೆಸರಿನ ಡೈರಿ ಬಗ್ಗೆ ಆರೋಪಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ಸಲ್ಲಿಕೆ ಪ್ರಕರಣ ತಾರ್ಕಿಕ ಅಂತ್ಯ ಕಾಣುವ ವರೆಗೂ ಬಿಜೆಪಿ ಹೋರಾಟ ಮಾಡಲಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಮಂಡಿಸಿದ ಆಯ-ವ್ಯಯದಲ್ಲಿ ಬರ ಹಾಗೂ ರೈತರ ಬಗ್ಗೆ ಹೆಚ್ಚಿನ ಪ್ರಸ್ತಾಪ ಇಲ್ಲ.
ಒಂದು ಸಮುದಾಯವನ್ನು ಓಲೈಸುವ ನಿಟ್ಟಿನಲ್ಲಿ ಮೌಲ್ವಿಗಳಿಗೆ ನೀಡುವ ಹಣ ಹೆಚ್ಚಿಸಿ, ಹಿಂದೂ ದೇವಸ್ಥಾನಗಳ ಪೂಜಾರಿಗಳನ್ನು ಕಡೆಗಣಿಸಲಾಗಿದೆ. ಮೌಲ್ವಿಗಳಿಗೆ ನೀಡುವ ಹಣವೂ ಹಿಂದೂ ದೇವಸ್ಥಾನಗಳಲ್ಲಿ ಸಂಗ್ರಹಗೊಂಡಿದ್ದೇ ಆಗಿದೆ. ಸಾಮಾಜಿಕ ತಾರತಮ್ಯ ನೀತಿ ಹಾಗೂ ಸಾಮರಸ್ಯಕ್ಕೆ ಧಕ್ಕೆ ತರುವ ಇಂತಹ ಕ್ರಮ ಸರಿಯಲ್ಲ ಎಂದರು.
ಸಿಎಂ ಮನಸ್ಸು ಮಾಡಬೇಕು: ಕಪ್ಪತಗುಡ್ಡಕ್ಕೆ ಸಂರಕ್ಷಿತ ಅರಣ್ಯ ಪ್ರದೇಶ ಸ್ಥಾನ ನೀಡಲು ಮುಖ್ಯಮಂತ್ರಿ ಮನಸ್ಸು ಮಾಡಿದರೆ ಒಂದು ದಿನ ಸಾಕು. ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂಬುದು ಜನರ ಒತ್ತಾಯ. ಇದಕ್ಕೆ ರಾಜ್ಯ ಸರಕಾರ ಸೂಕ್ತ ರೀತಿಯ ಸ್ಪಂದನೆ ತೋರುತ್ತಿಲ್ಲ ಎಂದು ಆರೋಪಿಸಿದರು.
ಪರೀಕರ್ ಜತೆ ಚರ್ಚೆ: ಮಹದಾಯಿ ವಿವಾದ ಕುರಿತಾಗಿ ಗೋವಾದ ನೂತನ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರೊಂದಿಗೆ ಚರ್ಚಿ ಸಲಾಗುವುದು.ಅದೇ ರೀತಿ ಕಾಂಗ್ರೆಸ್‌ನವರು ಗೋವಾ ಕಾಂಗ್ರೆಸ್ ನಾಯಕರ ಮನವೊಲಿಸುವ ಕಾರ್ಯ ಮಾಡಲಿ. ಸಾಧ್ಯವಾಗದಿದ್ದರೆ ಕಾಂಗ್ರೆಸ್ ಹೈಕಮಾಂಡ್‌ನಿಂದ ಅವರ ಮೇಲೆ ಒತ್ತಡ ತರಲಿ ಎಂದು ಶೆಟ್ಟರ ಒತ್ತಾಯಿಸಿದರು.