ಬೆಂಗಳೂರು: ವಿವೇಚನೆ ಅಥವಾ ಸಾಮಾನ್ಯ ಪರಿಜ್ಞಾನವಿಲ್ಲದೆ ಕರ್ನಾಟಕದ ಕೆಲವು ಕಾಂಗ್ರೆಸ್ ನಾಯಕರು ದೇಶದ ಪ್ರಧಾನಮಂತ್ರಿಯನ್ನು ದೂಷಿಸಿ, ಪ್ರಚಾರಗಿಟ್ಟಿಸಲು ಮುಂದಾಗಿದ್ದಾರೆ. ಇದು ದುರದೃಷ್ಟಕರ. ಪ್ರಜ್ಞಾವಂತ ಕನ್ನಡಿಗರು ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಾದ ಕಾಂಗ್ರೆಸ್ ನಾಯಕರ ಕುತಂತ್ರ ಮತ್ತು ಸತ್ಯಕ್ಕೆ ದೂರವಾದ ಟೀಕೆಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎನ್ನುವ ಖಚಿತ ನಂಬಿಕೆ ನನಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಯಾವುದೇ ಮೇಲ್ಜಾತಿ, ಮೇಲ್ವರ್ಗ, ಉದ್ದಿಮೆ ಅಥವಾ ವಂಶಪಾರಂಪರ್ಯದ ಹಿನ್ನೆಲೆಯಿಂದ ಪ್ರಧಾನಿ ನರೇಂದ್ರ ಮೋದಿಯವರು ಮೇಲೆ ಬಂದಿಲ್ಲ. ಅಧಿಕಾರಕ್ಕಾಗಿ ವಂಶಪಾರಂಪರ್ಯಕ್ಕೆ ದಾಸರಾದ ಕಾಂಗ್ರೆಸ್ ನಾಯಕರು ನರೇಂದ್ರ ಮೋದಿಯವರ ದಕ್ಷತೆ, ಕಾರ್ಯದೀಕ್ಷೆ, ತತ್ವಸಿದ್ದಾಂತವನ್ನು ತಿಳಿದುಕೊಳ್ಳಲೇ ಇಲ್ಲ. ಈ ಮಾತು ಸಿದ್ದರಾಮಯ್ಯ, ಮಲ್ಲಿಕಾರ್ಜುನಖರ್ಗೆ, ವೀರಪ್ಪ ಮೊಯಿಲಿ ಮೊದಲಾದ ಎಲ್ಲಾ ನಾಯಕರಿಗೂ ಅನ್ವಯಿಸುತ್ತದೆ ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿ ಬಡಜನರು, ಶೋಷಿತ ವರ್ಗಗಳ ಮತ್ತು ದೀನದಲಿತರ ಸಲುವಾಗಿ ಅನುಷ್ಠಾನಕ್ಕೆ ತಂದ “ಗುಜರಾತ್ ಮಾದರಿ”ಆಡಳಿತ ಸಹಿಸದಂತಾಗಿದೆ. 2014ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಮತ್ತು ನರೇಂದ್ರಮೋದಿಯವರು ದೇಶದ ಮಹಾಜನತೆಯ ಆಶೀರ್ವಾದ ಗಳಿಸಲು ಗುಜರಾತ್ ಮಾದರಿ ದಾರಿದೀಪವಾಯಿತು ಎನ್ನುವುದನ್ನೂ ಕಾಂಗ್ರೆಸ್ ನಾಯಕರು ಮರೆಯಬಾರದು ಎಂದು ಕಾರಜೊಳ ಹೇಳಿದ್ದಾರೆ.
ತಮ್ಮ ಸುಧೀರ್ಘ ಅಧಿಕಾರಾವಧಿಯಲ್ಲಿ ಯಾವತ್ತೂ ತಮ್ಮ ವ್ಯಕ್ತಿತ್ವಕ್ಕೆ ಜಾತೀಯತೆ, ಸ್ವಜನಪಕ್ಷಪಾತ, ಕುಟುಂಬವ್ಯಾಮೋಹ ಮತ್ತು ಭ್ರಷ್ಠಾಚಾರದ ಕಳಂಕ ಅಂಟದಂತೆ ಕಠೋರವಾದ ಶಿಸ್ತನ್ನು ರೂಡಿಸಿಕೊಂಡು ಬಂದಿರುವುದರಿಂದಲೇ ಈ ದೇಶದ ಜನ ಅದರಲ್ಲೂ ವಿಶೇಷವಾಗಿ ಎಲ್ಲಾ ಜಾತಿ-ಧರ್ಮಗಳ ಜನಸಾಮಾನ್ಯರು ನರೇಂದ್ರಮೋದಿಯವರಲ್ಲಿ ನಂಬಿಕೆ, ವಿಶ್ವಾಸವಿರಿಸಿಕೊಳ್ಳಲು ಸಾಧ್ಯವಾಯಿತೇ ಹೊರತು ಪ್ರತಿಪಕ್ಷಗಳು ಹೇಳುವಂತೆ ಮಾಧ್ಯಮಗಳ ಪ್ರಚಾರದ ಭರಾಟೆಯಿಂದೇನಲ್ಲ ಎಂದಿದ್ದಾರೆ.
ದಿನನಿತ್ಯ ಮೋದಿಯವರನ್ನು ಏಕವಚನದಲ್ಲಿ ಸಂಬೋಧಿಸುತ್ತ, ಕೀಳು ಮಾತುಗಳಲ್ಲಿ ನಿಂದಿಸುತ್ತ, ಅವಮಾನಿಸುತ್ತ ಸಾಗಿರುವ ಕಾಂಗ್ರೆಸ್ ಮತ್ತಿತರ ಪ್ರತಿಪಕ್ಷಗಳ ನಾಯಕರು ತನ್ಮೂಲಕ ತಮ್ಮನ್ನು ತಾವೇ ಜನತೆಯ ಕಣ್ಣಲ್ಲಿ ಸಣ್ಣವರನ್ನಾಗಿ ಮಾಡಿಕೊಳ್ಳುತ್ತಿದ್ದಾರೆಯೇ ಹೊರತು, ಅವರುಗಳ ಇಂತಹ ಟೀಕೆ-ಟಿಪ್ಪಣಿಗಳಿಂದ ಮೋದಿಯವರ ಜನಪ್ರೀಯತೆಯಲ್ಲೇನೂ ವ್ಯತ್ಯಾಸವಾಗುವುದಿಲ್ಲ. ನರೇಂದ್ರ ಮೋದಿಯವನ್ನು ಸರ್ವಾಧಿಕಾರಿ ಎಂದೂ, ಭಾಜಪ ಪಕ್ಷದ ಫ್ಯಾಸಿಸ್ಟ್ ಎಂದು ಟೀಕಿಸುವ ನಾಯಕರು ಹಾಗೂ ಒಂದು ವರ್ಗದ ಬುದ್ದಿಜೀವಿಗಳು ಯಾಕೆ ಕಾಂಗ್ರೆಸ್ ಪಕ್ಷ ರಾಜಕೀಯ ಸಂಸ್ಕೃತಿಯನ್ನೇಕೆ ಪ್ರಶ್ನಿಸುತ್ತಿಲ್ಲ? ವ್ಯಕ್ತಿಪೂಜೆ, ಭಟ್ಟಂಗಿತನ ಮತ್ತು ಗುಲಾಮನಿಷ್ಟೆ ತೋರುವ ಕಾಂಗ್ರೆಸ್ ನಾಯಕರು ಯಾಕೆ ತಮ್ಮ ರಾಷ್ಟ್ರೀಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೆರಿಟ್ ಆಧರಿಸಿದ ಚುನಾವಣೆಯೂ ಇಲ್ಲ, ಆಯ್ಕೆ ಪ್ರಕ್ರಿಯೆಯೂ ಇಲ್ಲ ಎಂಬ ಅಸಂಗತ ನಾಟಕ ಕುರಿತು ಏನು ಹೇಳುತ್ತಾರೆ? ಅಹಿಂದ, ಅಹಿಂದೇತರ ಎಂಬ ಮಂತ್ರ ಪಠಿಸುತ್ತಿರುವ ಸಿದ್ದರಾಮಯ್ಯನವರನ್ನೇಕೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತರಲ್ಲ? ಮಲ್ಲಿಕಾರ್ಜುನ ಖರ್ಗೆಯವರನ್ನೇಕೆ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸುತ್ತಿಲ್ಲ ಎಂದು ಗೋವಿಂದ ಕಾರಜೋಳ ಕಟುವಾಗಿ ಪ್ರಶ್ನಿಸಿದ್ದಾರೆ.