Advertisement
ಗೋವಿಂದ ಭಟ್ ಸೂರಿಕುಮೇರು ಗೋವಿಂದ ಭಟ್ಟರು ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಯಕ್ಷರಂಗದಲ್ಲಿ ಇರುವ ಸುಪ್ರಸಿದ್ಧ ಕಲಾವಿದರೆಲ್ಲರೂ ಭಟ್ಟರ ಶಿಷ್ಯರು. ಭಟ್ಟರು ಕುರಿಯ ವಿಠಲ ಶಾಸ್ತ್ರಿಗಳಲ್ಲಿ ಯಕ್ಷಗಾನ ಹೆಜ್ಜೆಗಳನ್ನು ಕಲಿತರು . ನಂತರ ಭರತನಾಟ್ಯ ಕಲಿತು 11ನೇ ವಯಸ್ಸಿನಲ್ಲೇ ಯಕ್ಷರಂಗ ಪ್ರವೇಶಿಸಿದರು .ಮೂಲ್ಕಿ , ಕೂಡ್ಲು , ಸುರತ್ಕಲ್ ,ಇರಾ ಮೇಳಗಳಲ್ಲಿ ತಿರುಗಾಟ ನಡೆಸಿ ಐದು ದಶಕಗಳಿಂದ ಧರ್ಮಸ್ಥಳ ಮೇಳದಲ್ಲಿ ಪ್ರಧಾನ ಕಲಾವಿದರಾಗಿ ಸೇವೆಗೈಯುತ್ತಿದ್ದಾರೆ . ಅರ್ಥಗಾರಿಕೆಯನ್ನು ಮಲ್ಪೆ ರಾಮದಾಸ ಸಾಮಗರಿಂದ ಅಭ್ಯಸಿಸಿರುವ ಭಟ್ಟರು ಸ್ತ್ರೀವೇಷ , ಪುಂಡುವೇಷ , ರಾಜವೇಷ , ಬಣ್ಣದವೇಷ , ಹಾಸ್ಯಪಾತ್ರ ಎಲ್ಲವನ್ನೂ ನಿರ್ವಹಿಸಬಲ್ಲ ಸವ್ಯಸಾಚಿ ಎನಿಸಿಕೊಂಡಿದ್ದಾರೆ . ಅವರ ಸುಭದ್ರೆ , ದ್ರೌಪದಿ , ಅಭಿಮನ್ಯು , ಬಬ್ರುವಾಹನ , ಶ್ರೀಕೃಷ್ಣ , ಶ್ರೀರಾಮ , ವಾಲಿ , ಕೌಂಡ್ಲಿಕ , ಕೌರವ , ಕಾರ್ತ್ಯ , ಜರಾಸಂಧ , ತಾಮ್ರಧ್ವಜ , ಅರ್ಜುನ , ಕರ್ಣ , ಭೀಷ್ಮ , ಭೌಮಾಸುರ , ಹನುಮಂತ , ಋತುಪರ್ಣ , ಗಣಮಣಿ , ಅಣ್ಣಪ್ಪ , ದಕ್ಷ ಮುಂತಾದ ಪಾತ್ರಗಳು ಅಪಾರ ಪ್ರಸಿದ್ಧಿ ಗಳಿಸಿವೆ .ತೆಂಕುತಿಟ್ಟಿನಲ್ಲಿ ಗದಾಯುದ್ಧ ಪ್ರಸಂಗದ ಕೌರವನ ಪಾತ್ರವನ್ನು ನಿರ್ವಹಿಸುವಲ್ಲಿ ಭಟ್ಟರನ್ನು ಮೀರಿಸುವವರಿಲ್ಲ ಎನ್ನಬಹುದು .