ಬೆಂಗಳೂರು: ಮೇಕೆದಾಟು ಯೋಜನೆ ವಿಚಾರದಲ್ಲಿ ಹಾಲಿ ಹಾಗೂ ಮಾಜಿ ಜಲಸಂಪನ್ಮೂಲ ಸಚಿವರ ನಡುವಿನ “ನೀರೆರಚಾಟ’ ಮುಂದುವರಿದಿದೆ.
ಮೇಕೆದಾಟು ಬಗ್ಗೆ ಸತ್ಯವನ್ನು ಬಿಚ್ಚಿಡುವ ಕೆಲಸ ಮಾಡಿದ್ದೇನೆ ಎಂದು ಹಾಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಹೇಳಿದ್ದು, ಸಚಿವರು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ತಿರುಗೇಟು ನೀಡಿದ್ದಾರೆ.
ಸಚಿವ ಗೋವಿಂದ ಕಾರಜೋಳ ಅವರು ಮೇಕೆದಾಟು ಯೋಜನೆ ಕುರಿತು ತಪ್ಪು ಮಾಹಿತಿ ನೀಡುತ್ತಿದ್ದಾರೆ. ನ್ಯಾಯಾ ಲಯದಲ್ಲಿರುವ ಜಲ ವಿವಾದದ ಬಗ್ಗೆ ಮನಸೋ ಇಚ್ಛೆ ಜಾಹೀರಾತು ನೀಡಿ ಕೀಳಾಗಿ ವರ್ತಿಸುತ್ತಿದ್ದಾರೆ. ಸಚಿವರಾಗಿ ಮುಂದುವರಿಯಲು ಅವರಿಗೆ ನೈತಿಕತೆ ಇಲ್ಲ ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ:ಹಿಮವರ್ಷ : ರಾಜ್ಯದ 400ಕ್ಕೂ ಅಧಿಕ ಪ್ರಮುಖ ರಸ್ತೆಗಳು ಬಂದ್
ನಮ್ಮ ಪ್ರಯತ್ನದಿಂದ ಹೆಚ್ಚುವರಿ ನೀರು ಸಿಕ್ಕಿತ್ತು ನಮ್ಮ ಸರಕಾರ ಇದ್ದಾಗ ಬೆಂಗಳೂರಿಗೆ ಹೆಚ್ಚುವರಿ ಕುಡಿಯುವ ನೀರಿನ ಅಗತ್ಯವನ್ನು ನ್ಯಾಯಾಧಿಕರಣಕ್ಕೆ ಮನವರಿಕೆ ಮಾಡಿಕೊಡಲಾಗಿತ್ತು. ಇದರ ಪರಿಣಾಮವಾಗಿ ಹೆಚ್ಚುವರಿ ಯಾಗಿ 4,75 ಟಿಎಂಸಿ ನೀರು ಸಿಕ್ಕಿತ್ತು. 23 ಟಿಎಂಸಿ ನೀರು ಸಂಗ್ರಹಕ್ಕೆ ಅವಕಾಶ ದೊರಕಿತು. ಇದರಿಂದಾಗಿ ಮೇಕೆದಾಟು ಯೋಜನೆಗೆ ಶಕ್ತಿ ಬಂತು, ಬಳಿಕ ಡಿಪಿಆರ್ ತಯಾರಿಸಿ ಕೇಂದ್ರಕ್ಕೆ ಕಳಿಸಿಕೊಡಲಾಯಿತು. ಆದರೆ, ಇದೆಲ್ಲ ಬಿಟ್ಟು ಕಾರಜೋಳ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಪಾಟೀಲ್ ಹೇಳಿದರು.