ರಬಕವಿ-ಬನಹಟ್ಟಿ: ಕಾಂಗ್ರೆಸ್ ಪಕ್ಷದ 60 ವರ್ಷದ ಅಧಿಕಾರ ಅವಧಿಯಲ್ಲಿ ಬಡವರ ಕಲ್ಯಾಣ, ದೀನ ದಲಿತರ ಉದ್ಧಾರದ ಬಗ್ಗೆ ಕೇವಲ ಮೊಸಳೆ ಕಣ್ಣೀರನ್ನು ಸುರಿಸುತ್ತಿದ್ದಾರೆ. ಕಾಂಗ್ರೆಸ್ ಜಾರಿ ಮಾಡಿದ ಗರೀಬಿ ಹಟಾವೋದಿಂದ ಕಾಂಗ್ರೆಸ್ ಪಕ್ಷದ ಬಡತನ ಮಾತ್ರ ನಿವಾರಣೆಯಾಗಿದೆ ಎಂದು ನೀರಾವರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಮಂಗಳವಾರ ಇಲ್ಲಿನ ಎಂ.ವಿ.ಪಟ್ಟಣ ಮೈದಾನದ ಹತ್ತಿರ ರಾಮಪ್ಪ ಚಿಕ್ಕೋಡಿ ಕ್ರೀಡಾಂಗಣದಲ್ಲಿ ನಡೆದ ತೇರದಾಳ ವಿಧಾನ ಸಭಾ ಚುನಾವಣಾ ಪ್ರಾಚಾರ ಸಭೆಯಲ್ಲಿ ಮಾತನಾಡಿದರು.
ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ. 15 ರಿಂದ 17, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 3 ರಿಂದ7 ರಷ್ಟು ಹೆಚ್ಚಿಗೆ ಮಾಡಿದ ಕೀರ್ತಿ ಭಾರತೀಯ ಜನತಾ ಪಕ್ಷದ್ದು. ಅಲ್ಪ ಸಂಖ್ಯಾತರಿಗೆ ಮೋಸ ಮಾಡುವ ಕಾರ್ಯವನ್ನು ಕಾಂಗ್ರೆಸ್ ಮಾಡಿದೆ. ಮುಸ್ಲಿಂರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಬಿಜೆಪಿ ರಾಜ್ಯದ 43 ಸಾವಿರ ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರಾನ್ನಾಗಿ ಮಾಡಿದೆ. ಕಾಂಗ್ರೆಸ್ ಪಕ್ಷ ಜಾತಿ ಜಾತಿ ಮಧ್ಯದಲ್ಲಿ ಜಗಳವನ್ನು ಹಚ್ಚಿ ಅದರ ಲಾಭವನ್ನು ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷ ತನ್ನ ದ್ವಂಧ್ವ ನೀತಿಯಿಂದಾಗಿ ದೇಶವನ್ನು ಇಬ್ಬಾಗವನ್ನಾಗಿಸಿದೆ.
ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ಡಾ.ಪರಮೇಶ್ವರ ಮತ್ತು ಮಹಾದೇವ ಪ್ರಸಾದರನ್ನು ಚುನಾವಣೆಯಲ್ಲಿ ಸೋಲಿಸಿದವರೇ ಕಾಂಗ್ರೆಸ್ ಪಕ್ಷದವರು. ಭಾರತೀಯ ಜನತಾ ಪಕ್ಷ ಬಾಗಲಕೋಟೆಯ ನೀರಾವರಿ ಯೋಜನೆಗೆ ಇಲ್ಲಿಯವರೆಗೆ ರೂ. ಆರು ಸಾವಿರ ಕೋಟಿಯಷ್ಟು ಹಣವನ್ನು ನೀಡಿದೆ. ಭಾರತೀಯ ಜನತಾ ಪಕ್ಷದಿಂದ ಮಾತ್ರ ದೇಶದ ಮತ್ತು ರಾಜ್ಯದ ಅಭಿವೃದ್ಧಿ ಸಾಧ್ಯ ಎಂದು ಗೋವಿಂದ ಕಾರಜೋಳ ತಿಳಿಸಿದರು.
ತೇರದಾಳ ಶಾಸಕ, ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಮಾತನಾಡಿ, ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ತೇರದಾಳ ಕ್ಷೇತ್ರಕ್ಕೆ 2000 ಕೋಟಿ ರೂ.ಗಳಷ್ಟು ಕಾಮಗಾರಿಗಳು ನಡೆದಿರುವುದು ದಾಖಲೆಯಾಗಿದ್ದು, ಅಭಿವೃದ್ಧಿಗೆ ಬಿಜೆಪಿಯನ್ನು ಗೆಲ್ಲಿಸಿಯೆಂದು ಹೇಳಿದರು.
ದೇಶ ಅಖಂಡತೆ, ಧರ್ಮ, ಸಂಸ್ಕೃತಿ ರಕ್ಷಣೆಗೆ ಬಿಜೆಪಿ ಅನಿವಾರ್ಯವಾಗಿದ್ದು, ಶತಮಾನಗಳ ಸಮಸ್ಯೆ ಹೊಂದಿದ್ದ ರಾಮ ಮಂದಿರ ವಿವಾದಕ್ಕೆ ತೆರೆ ಎಳೆದಿರುವ ಪ್ರಧಾನಿ ಮೋದೀಜಿ ಹಾಗು ಗೃಹ ಸಚಿವ ಅಮಿತ್ ಶಾ ಪ್ರಪಂಚಕ್ಕೆ ಶಕ್ತಿಶಾಲಿ ರಾಷ್ಟ್ರವನ್ನಾಗಿಸುವಲ್ಲಿಯೂ ಕಾರಣರಾಗಿದ್ದಾರೆಂದರು.
ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಕಲ್ಯಾಣಕ್ಕಾಗಿ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ. ಯೋಗ, ಆಯುಷ್ಮಾನ ಭಾರತ, ಉಜ್ವಲಾ ಯೋಜನೆ, ಜಲಜೀವನ ಯೋಜನೆ ಹಾಗೂ ಕೋವಿಡ್ ಹಾಗೂ ಪ್ರಕೃತಿ ವಿಕೋಪಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ದೇಶವನ್ನು ಮತ್ತೆ ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋದ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿ.ಎಸ್. ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರದ್ದು ಎಂದು ಗದ್ದಿಗೌಡರ ತಿಳಿಸಿದರು.
ಸಭೆಯಲ್ಲಿ ಕೈಗಾರಿಕೆ ಸಚಿವೆ ಮುರಗೇಶ ನಿರಾಣಿ, ಹರಿಯಾಣದ ಕುರಕ್ಷೇತ್ರ ಸಂಸದ ನಯಾಬಸಿಂಗ್ ಶೈಣ ಮಾತನಾಡಿದರು. ವೇದಿಕೆಯ ಮೇಲೆ ಪಿ.ಎಚ್.ಪೂಜಾರ, ನಾರಾಯಣಸಾ ಭಾಂಡಗೆ, ಧರೆಪ್ಪ ಉಳ್ಳಾಗಡ್ಡಿ, ಸಂಜಯ ತೆಗ್ಗಿ, ಬಸವರಾಜ ಕೊಣ್ಣೂರ, ಸುರೇಶ ಅಕ್ಕಿವಾಟ, ಜಿ.ಎಸ್.ಗೊಂಬಿ, ಸುರೇಶ ಚಿಂಡಕ, ಬಸವರಾಜ ತೆಗ್ಗಿ, ಸುರೇಶ ಅಕ್ಕಿವಾಟ, ಆನಂದ ಕಂಪು ಸೇರಿದಂತೆ ಅನೇಕರು ಇದ್ದರು.