ಬಾಗಲಕೋಟೆ: ಈ ದೇಶಕ್ಕೆ ಬ್ರಿಟಿಷರಿಗಿಂತ ಕಾಂಗ್ರೆಸ್ಸಿಗರೇ ಅತಿ ಹೆಚ್ಚು ಮೋಸ ಮಾಡಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯೇ ಅಖಂಡ ವಿಜಯಪುರಕ್ಕೆ ನೀರಾವರಿ ವಿಷಯದಲ್ಲಿ ಮಾಡಿದ ಮೋಸ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆರೋಪಿಸಿದರು.
ತೋಟಗಾರಿಕೆ ವಿವಿಯಲ್ಲಿ ಯುವ ಜನೋತ್ಸವ ಕಾರ್ಯ ಕ್ರಮ ಉದ್ಘಾಟಿಸಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, 1956ರಲ್ಲಿ ಅಖಂಡ ವಿಜಯಪುರ ಮುಂಬಯಿ ಪ್ರಾಂತದಲ್ಲಿತ್ತು. ಕೊಯ್ನಾ ಜಲಾಶಯ ನಿರ್ಮಾಣ ಯೋಜನೆ ಆಗ ಮಂಜೂರಾಗಿತ್ತು. ಮುಂದೆ ನ.1, 1956ರಲ್ಲಿ ಭಾಷಾ ಪ್ರಾಂತ್ಯವಾರು ರಾಜ್ಯ ವಿಭಜನೆಗೊಂಡವು.
ಆಗ ನಾವು ಮೈಸೂರು ಪ್ರಾಂತ್ಯಕ್ಕೆ ಸೇರಿದೆವು. ಕೊಯ್ನಾ ಜಲಾಶಯ ಆಗ ಮುಂಬಯಿ ಪ್ರಾಂತ್ಯಕ್ಕೆ ಸೇರಿತು. ಆಗ ಮುಂಬಯಿ ಪ್ರಾಂತ್ಯದವರು ಕೊಯ್ನಾ ಜಲಾಶಯ ನಿರ್ಮಾಣಕ್ಕೆ 2 ಕೋಟಿ ನಿಮ್ಮ ಪಾಲಿನ ಹಣ ಕೊಡಬೇಕು. ಅದರಿಂದ ಅಖಂಡ ವಿಜಯಪುರ ಜಿಲ್ಲೆ ನೀರಾವರಿಯಾಗುತ್ತದೆ ಎಂದು ಹೇಳಿದ್ದರು.
ಆಗ ಇದೇ ಕಾಂಗ್ರೆಸ್‌ನವರು ಅಧಿಕಾರದಲ್ಲಿದ್ದರು. 2 ಕೋಟಿ ಕೊಡದ ಕಾರಣ ಇಂದು ಕೊಯ್ನಾ ಯೋಜನೆಯಿಂದ ಅಖಂಡ ವಿಜಯಪುರ ಜಿಲ್ಲೆ ನೀರಾವರಿಯಿಂದ ವಂಚನೆಗೆ ಒಳಗಾಯಿತು ಎಂದರು.