Advertisement

ಭೂ ಒಡೆತನ ಯೋಜನೆಗೆ ಅನುದಾನದ ಕೊರತೆ ಇಲ್ಲ : ಡಿಸಿಎಂ ಕಾರಜೋಳ ಸೂಚನೆ

07:02 PM Sep 09, 2020 | sudhir |

ಬೆಂಗಳೂರು : ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶಾಶ್ವತವಾಗಿ ಆಸ್ತಿಯಾಗಿ ಸೃಜನೆಯಾಗುವ ಭೂಒಡೆತನ ಯೋಜನೆಗೆ ಅನುದಾನದ ಕೊರತೆ ಇಲ್ಲ. ಜಿಲ್ಲಾ ಮಟ್ಟದಿಂದ ಆಯ್ಕೆಯಾದ ಎಲ್ಲಾ ಪ್ರಸ್ತಾವನೆಗಳನ್ನು ಪಡೆದು ತ್ವರಿತವಾಗಿ ಮಂಜೂರು ಮಾಡುವಂತೆ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಎಲ್ಲಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ಸೂಚಿಸಿದರು.

Advertisement

ಬೆಂಗಳೂರಿನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿಂದು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಎಲ್ಲಾ ನಿಗಮಗಳು ಕಾರ್ಪೋರೇಟ್ ಸಂಸ್ಥೆಗಳಂತೆ ಕಾರ್ಯನಿರ್ವಹಿಸಬೇಕು. ಕಚೇರಿಗಳನ್ನು ಗಣಕೀಕರಣಗೊಳಿಸಬೇಕು. ಪರಿಶಿಷ್ಟರ ಏಳಿಗೆಗೆ ಸಕ್ರಿಯವಾಗಿ ಸ್ಪಂದಿಸಿ, ಅರ್ಹರಿಗೆ ಸೌಕಲಭ್ಯಗಳು ಒದಗುವಂತೆ ಕಾರ್ಯನಿರ್ವಹಿಸಬೇಕು. ಭೂ ಒಡೆತನ ಯೋಜನೆಯಡಿ ಭೂಮಿ ನೀಡಿದರೆ ಬೇರೆಯವರಿಗೆ ಮಾರಾಟ ಮಾಡಲು ಅವಕಾಶ ಇರುವುದಿಲ್ಲ. ಮುಂದಿನ ಪೀಳಿಗೆಗೂ ಆಸ್ತಿಯಾಗಿ ಸೃಜನೆಯಾಗುತ್ತದೆ. ವೈಯಕ್ತಿಕ ಕೊಳವೆ ಬಾವಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಕೊಳವೆ ಬಾವಿಗಳನ್ನು ಕೊರೆಸಲು ನಿಗಮವಾರು ಗಡುವು ನೀಡಲಾಗಿದ್ದು, ಆ ಅವಧಿಯೊಳಗೆ ತ್ವರಿತವಾಗಿ ಕೊಳವೆ ಬಾವಿಗಳನ್ನು ಕೊರೆಸಲು ಕ್ರಮಕೈಗೊಳ್ಳಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಪ್ರಸಕ್ತ ಸಾಲಿನಲ್ಲಿ 236 ಕೋಟಿ ರೂ. ಮೀಸಲಿಡಲಾಗಿದ್ದು, ವಿವಿಧ ಯೋಜನೆಗಳಡಿ 26395 ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯ ಒದಗಿಸುವ ಗುರಿಯನ್ನು ಹೊಂದಲಾಗಿದೆ. 60,742 ಅರ್ಜಿಗಳು ಸಲ್ಲಿಕೆಯಾಗಿವೆ. ಆದಿ ಜಾಂಬವ ಅಭಿವೃದ್ಧಿ ನಿಗಮಕ್ಕೆ 172 ಕೋಟಿ ರೂ ಅನುದಾನವನ್ನು ಮೀಸಲಿಡಲಾಗಿದ್ದು, 14,381 ಫಲಾನುಭವಿಗಳಿಗೆ ಸೌಲಭ್ಯ ನೀಡುವ ಗುರಿಯನ್ನು ಹೊಂದಲಾಗಿದೆ. 43,390 ಅರ್ಜಿಗಳು ಸಲ್ಲಿಕೆಯಾಗಿವೆ. ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮಕ್ಕೆ 108 ಕೋಟಿ ರೂ. ಅನ್ನು ಮೀಸಲಿಡಲಾಗಿದ್ದು, 26000 ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯ ಕಲ್ಪಿಸುವ ಗುರಿಯನ್ನು ಹೊಂದಲಾಗಿದೆ. 59,645 ಅರ್ಜಿಗಳು ಸಲ್ಲಿಕೆಯಾಗಿವೆ. ಕರ್ನಾಟಕ ಭೋವಿ ಅಭಿವೃದ್ದಿ ಹಾಗೂ ತಾಂಡ ಅಭಿವೃದ್ದಿ ನಿಗಮಕ್ಕೆ ಅನುದಾನವನ್ನು ನೀಡಿ, ಗುರಿಯನ್ನು ನಿಗಧಿಪಡಿಸಲಾಗಿದೆ. ಎಲ್ಲಾ ನಿಗಮಗಳು ಅರ್ಜಿಗಳನ್ನು ಪರಿಶೀಲಿಸಿ,ಅರ್ಹರಿಗೆ ಸೌಲಭ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಬೇಕು. ಫಲಾನುಭವಿಗಳ ಆಯ್ಕೆಯನ್ನು ಶೀಘ್ರವಾಗಿ ಕೈಗೊಳ್ಳಲು ಕ್ರಮವಹಿಸಬೇಕು. ಅಲೆಮಾರಿ ಸಮುದಾಯದವರ ಏಳಿಗೆಗೆ ಶ್ರಮಿಸಬೇಕು. ಅವರು ಸ್ವಾವಲಂಭಿಗಳಾಗುವಂತಹ ಯೋಜನೆಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

ಸಭೆಯಲ್ಲಿ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯ ಸಲಹೆಗಾರರಾದ ಶ್ರೀ ಇ.ವೆಂಕಟಯ್ಯ, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಶ್ರೀ ರವಿಕುಮಾರ್ ಸುರಪುರ್, ಅಪರ ನಿರ್ದೇಶಕ ಶ್ರೀ ನಾಗೇಶ್, ಆದಿಜಾಂಬವ ಅಭಿವೃದ್ಧಿ ನಿಗಮದ ಎಂಡಿ ಶ್ರೀ ನಟರಾಜ್, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶ್ರೀ ಹನುಮನರಸಯ್ಯ, ಆದಿಜಾಂಬವ ಅಭಿವೃದ್ಧಿ ನಿಗಮದ ಎಂಡಿ ಶ್ರೀ ನಟರಾಜ್, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪರಶುರಾಂ ಶಿನ್ನಾಳಕರ, ಡಿಸಿಎಂ ಅವರ ಆಪ್ತಕಾರ್ಯದರ್ಶಿ ಶ್ರೀ ವಿ.ಶ್ರೀನಿವಾಸ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next