Advertisement

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬದ್ದ ; ಡಿಸಿಎಂ ಕಾರಜೋಳ

06:19 PM Aug 28, 2020 | sudhir |

ಬೆಂಗಳೂರು: ಇಪ್ಪತ್ತೊಂದನೆ ಶತಮಾನದಲ್ಲಿ ಪ್ರಪ್ರಥಮವಾಗಿ ಕೇಂದ್ರ ಸರ್ಕಾರವು ಯುವಪೀಳಿಗೆಗೆ ಅನುಗುಣವಾಗಿ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಬದ್ದವಾಗಿದೆ. ಶಿಕ್ಷಣ ಕ್ಷೇತ್ರದಲ್ಲೂ ಕರ್ನಾಟಕ ಎಂದೆಂದೂ ನಂಬರ್ ಒನ್ ಆಗಿರುವಂತೆ ಶ್ರಮಿಸಬೇಕು ಎಂದು ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ಕರೆ ನೀಡಿದರು.

Advertisement

ಬೆಂಗಳೂರು ವಿಶ್ವವಿದ್ಯಾಲಯವು ಆಯೋಜಿಸಿದ್ದ 5 ದಿನಗಳ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದ ಅವರು, ಇಂದಿನ ಪೀಳಿಗೆಗೆ ಅನುಗುಣವಾಗಿ, ಅತ್ಯಾಧುನಿಕ ಆವಿಷ್ಕಾರ, ತಂತ್ರಜ್ಞಾನಗಳಿಗೆ ತಕ್ಕಂತೆ ಆಧುನಿಕ ಶಿಕ್ಷಣಕ್ಕೆ ಪೂರಕವಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಅಂಗೀಕರಿಸಿ, ಜಾರಿಗೊಳಿಸುತ್ತಿದೆ. ಶಿಕ್ಷಣ ರಂಗದಲ್ಲೂ ಹೊಸ ಕ್ರಾಂತಿ ಮೂಡಿಸುವ ಹಾಗೂ ಯುವಪೀಳಿಗೆ ಅನುಗುಣವಾದ ಶಿಕ್ಷಣವನ್ನು ದೊರಕಿಸಿಕೊಡುವ ಆಶಯ ಪ್ರಧಾನ ಮಂತ್ರಿಯವರದಾಗಿದೆ. ಕಳೆದ ಮೂರು ದಶಕಗಳ ನಂತರ ಮೊಟ್ಟಮೊದಲಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ ಕೀರ್ತಿ ಪ್ರಸ್ತುತ ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ. ಹಳೆ ಶಿಕ್ಷಣ ನೀತಿಗೆ ತಿಲಾಂಜಲಿ ಹಾಡಿದೆ. ಕರ್ನಾಟಕ ಸರ್ಕಾರವು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವ ರಾಜ್ಯದಲ್ಲಿ ಮೊದಲ ರಾಜ್ಯ ಎನ್ನುವ ಹೆಗ್ಗಳಿಗೆ ಪಾತ್ರವಾಗಲಿದೆ ಎಂದು ಅವರು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಅನ್ನು ಅನುಷ್ಠಾನಗೊಳಿಸಲು ರಾಜ್ಯದಲ್ಲಿ ಈಗಾಗಲೇ ರೆಸಲ್ಯೂಶನ್ ಅನ್ನು ಅಂಗೀಕರಿಸಲಾಗಿದೆ. ಆಧುನಿಕ ಶಿಕ್ಷಣಕ್ಕೆ ಅನುಗುಣವಾಗಿ ಇನ್ನೂ ಹೆಚ್ಚು ವಿಶ್ವವಿದ್ಯಾಲಯ, ಕಾಲೇಜು, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಬದ್ದವಾಗಿದೆ. ರಾಜ್ಯದಲ್ಲಿರುವ ಶಿಕ್ಷಣ ನೀತಿಯನ್ನು ರಾಷ್ಟ್ರೀಯ ಶಿಕ್ಷಣ ನೀತಿಗನುಗುಣವಾಗಿ ರೂಪಿಸಲಾಗುವುದು. ಶಿಕ್ಷಣ ತಜ್ಞರು, ಸಾರ್ವಜನಿಕರ ಸಲಹೆಗಳನ್ನು ಸ್ವೀಕರಿಸಲು ಸರ್ಕಾರ ಸಿದ್ದಗಿದ್ದು, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಈ ಹೊಸ ಶಿಕ್ಷಣ ನೀತಿಯು ಈ ನೆಲದ ಮೌಲ್ಯಗಳನ್ನು ಎತ್ತಿಹಿಡಿಯಲಿದೆ. ಮೌಲ್ಯಾಧರಿತ ಶಿಕ್ಷಣ ಪದ್ದತಿಯನ್ನು ಒಳಗೊಂಡಿದೆ. ಆಂಗ್ಲರ ಊಳಿಗಮಾನ್ಯ ಶಾಹಿ ಕಾಲದ ಶಿಕ್ಷಣ ನೀತಿಗೆ ಇತಿಶ್ರೀ ಹಾಡಲಿದೆ. ಹೊಸ ಶಿಕ್ಷಣ ನೀತಿಯು ಈ ಹಿಂದೆ ಇದ್ದ ಅನೇಕ ನ್ಯೂತನಗಳನ್ನು ತೊಡೆದುಹಾಕಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮೂಡಿಸಲಿದೆ.

3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಕಲಿಸಲು ಹೊಸಕಲಿಕಾ ಕಾರ್ಯಕ್ರಮವನ್ನು ರೂಪಿಸಲಾಗುವುದು. ಮಗುವಿನಲ್ಲಿರುವ ಕಲಿಕಾ ಸಾಮರ್ಥವನ್ನು ಮನಗಂಡು ಈ ನಿರ್ಧಾರಕ್ಕೆ ಬರಲಾಗಿದೆ. ಮಗುವಿಗೆ ಹೋಂ ವರ್ಕ್ ಹೊರೆಯನ್ನು ತೊಡೆದುಹಾಕಿ ಶಾಲೆಯ ಅವಧಿಯಲ್ಲಿ ಪಾಠ, ಪಠ್ಯೇತರ ಚಟುವಟಿಕೆಗಳನ್ನು ಅಳವಡಿಸಿಕೊಂಡು ಮಕ್ಕಳ ಸುಪ್ತಚೇತನದಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಲು ಅವಕಾಶ ಕಲ್ಪಿಸಲಾಗಿದೆ. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ, ತಮ್ಮಲ್ಲಿರುವ ಪ್ರತಿಭೆಯು ಹೊರಹೊಮ್ಮಿ ಹೆಮ್ಮರವಾಗಲು ನೆರವಾಗುತ್ತದೆ ಎಂದರು.

Advertisement

6 ನೇ ತರಗತಿಯವರಿಗೆ ವೃತ್ತಿಪರ ಶಿಕ್ಷಣ ಲಭ್ಯವಾಗಲಿದೆ. ಇದರಿಂದ ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲೇ ಸುಪ್ತಚೇತನದಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪೋಷಿಸಲು ಅನುಕೂಲವಾಗುತ್ತದೆ. ಅವರ ಆಸಕ್ತಿಗೆ ಅನುಗುಣವಾಗಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next