ಹುಬ್ಬಳ್ಳಿ: ”ಬಿಜೆಪಿಯವರು ರಾಜಭವನವನ್ನು ಪಕ್ಷದ ಕಚೇರಿಯನ್ನಾಗಿ ಮಾಡಿಕೊಂಡಂತೆ ಕಾಣಿಸುತ್ತಿದೆ. ಪ್ರತಿಯೊಂದು ಸಣ್ಣಪುಟ್ಟ ದೂರುಗಳನ್ನು ರಾಜ್ಯಪಾಲರಿಗೆ ನೀಡುತ್ತಿರುವುದು ಗಮನಿಸಿದರೆ ಅವರ ಕಚೇರಿ ಕಲ್ಯಾಸಿಪಾಳ್ಯದ ಪೊಲೀಸ್ ಠಾಣೆಗಿಂತ ಕಡೆಯಾಯ್ತಾ ಎಂಬ ಅನುಮಾನ ಮೂಡುತ್ತಿದೆ” ಎಂದು ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಗುರುವಾರ(ಆ 29) ಸುದ್ದಿಗಾರರೊಂದಿಗೆ ಮಾತನಾಡಿ ‘ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲ, ಅವರ ಒಂದು ಸಹಿಯಿಲ್ಲ. ಪ್ರಕರಣದಲ್ಲಿ 19 ಜನರ ಹೆಸರಿದ್ದರೂ ಸಹ ಅವರನ್ನು ಬಿಟ್ಟು ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡಿರುವುದು ರಾಜಕೀಯ ಷಡ್ಯಂತ್ರ ಎಂಬುದು ಸ್ಪಷ್ಟವಾಗುತ್ತದೆ’ ಎಂದು ಹರಿಹಾಯ್ದರು.
ಮುಡಾ ಹಗರಣದಲ್ಲಿ ಕಾಂಗ್ರೆಸ್‌ನವರ ಕೈವಾಡ ಎಂಬ ಬಿಜೆಪಿಯವರ ಆರೋಪಕ್ಕೆ ತಿರುಗೇಟು ನೀಡಿ ‘ಇದು ಶುದ್ದ ಸುಳ್ಳು. ಸಿಎಂ ಬೆಂಬಲಕ್ಕೆ ಪಕ್ಷದ ಎಲ್ಲಾ ಶಾಸಕರು ಹಾಗೂ ಹೈಕಮಾಂಡ್ ಇದೆ. ಅಷ್ಟೇ ಅಲ್ಲದೆ ರಾಜ್ಯದ ಜನರು ಸಿದ್ದರಾಮಯ್ಯರ ಬೆಂಬಲಕ್ಕೆ ನಿಂತಿದ್ದಾರೆ. ಹೀಗಿದ್ದರೂ ಸಹ ಹಿಂದುಳಿದ ನಾಯಕನಿಗೆ ಮಸಿ ಬಳಿಯುವ ಕೆಲಸ ಬಿಜೆಪಿ ಮಾಡುತ್ತಿದೆ’ ಎಂದು ಆರೋಪಿಸಿದರು.
‘ಇದೀಗ ರಾಜ್ಯಪಾಲರ ಕಚೇರಿ ಹಾಗೂ ಬಿಜೆಪಿ ಕಚೇರಿಗೆ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಬಿಜೆಪಿ ಪಾದಯಾತ್ರೆಗಿಂತಲೂ ಕಾಂಗ್ರೆಸ್ ಜನಾಂದೋಲನಕ್ಕೆ ಜನರು ಹೆಚ್ಚಿನ ಬೆಂಬಲ ನೀಡಿದ್ದಾರೆ. ಆದರೆ ಬಿಜೆಪಿಯವರು ಹಸಿಸುಳ್ಳು ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಪ್ರಸಂಗವೇ ಬರುವುದಿಲ್ಲ’ ಎಂದರು.
ದರ್ಶನ್‌ಗೆ ವಿಐಪಿ ಟ್ರಿಟಮೆಂಟ್ ಖಂಡನೀಯ
‘ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ನಟ ದರ್ಶನ್‌ಗೆ ಜೈಲಿನಲ್ಲಿ ವಿಐಪಿ ಟ್ರಿಟಮೆಂಟ್ ಕೊಟ್ಟಿರುವುದು ಖಂಡನೀಯ. ಅವರು ಯಾರೇ ಇರಲಿ ಆರೋಪಿ ಆರೋಪಿನೆ. ಅವರಿಗೆ ಜೈಲಿನಲ್ಲಿ ಟೀ ಮತ್ತು ಸಿಗರೇಟ್ ವ್ಯವಸ್ಥೆ ಮಾಡಿರುವುದು ತಪ್ಪು. ದರ್ಶನ್ ಒಂದೇ ಪ್ರಕರಣದಲ್ಲಿ ಅಲ್ಲ, ಜೈಲಿನಲ್ಲಿ ಎಲ್ಲಾ ವ್ಯವಸ್ಥೆ ಸರಿಯಾಗಬೇಕಿದೆ’ ಎಂದರು.