ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಥಾವರ್‍ಚಂದ್ ಗೆಹ್ಲೋಟ್ ಅವರು ಇಂದು ಪ್ರಮಾಣ ವಚನ ಸ್ವಿಕರಿಸಿದರು. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ಥಾವರ್‍ಚಂದ್ ಗೆಹ್ಲೋಟ್ ಅವರಿಗೆ ಪ್ರಮಾಣ ವಚನವನ್ನು ಬೋಧಿಸಿದರು.
ನೂತನ ರಾಜ್ಯಪಾಲರ ಪ್ರಮಾಣ ವಚನ ಕಾರ್ಯಕ್ರಮವು ರಾಜ್ಯದ ವಿವಿಧ ನಾಯಕರ ಸಮಾಗಮಕ್ಕೆ ಸಾಕ್ಷಿಯಾಯಿತು. ಬಿಜೆಪಿ- ಕಾಂಗ್ರೆಸ್ ನ ಹಿರಿಯ ನಾಯಕರು ರಾಜಕೀಯ ಮರೆತು ಕೆಲಹೊತ್ತು ಪರಸ್ಪರ ಮಾತುಕತೆ ನಡೆಸಿದರು.
ಇದನ್ನೂ ಓದಿ:ರಾಜ್ಯದ 19ನೇ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ ಥಾವರ್ ಚಂದ್ ಗೆಹ್ಲೋಟ್
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಮತ್ತು ಡಾ ಸಿ ಎನ್ ಅಶ್ವಥನಾರಾಯಣ, ಸಚಿವರಾದ ಕೆ ಎಸ್ ಈಶ್ವರಪ್ಪ, ಆರ್. ಅಶೋಕ್, ಬಸವರಾಜ ಬೊಮ್ಮಾಯಿ, ಎಸ್ ಸುರೇಶ್ ಕುಮಾರ್, ವಿ. ಸೋಮಣ್ಣ, ಎಸ್. ಟಿ. ಸೋಮಶೇಖರ್, ಮುರುಗೇಶ್ ಆರ್ ನಿರಾಣಿ, ಡಾ ಕೆ ಸುಧಾಕರ್, ಸಿ. ಪಿ. ಯೋಗೇಶ್ವರ್ ಮತ್ತು ಆರ್. ಶಂಕರ್, ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆಯ ರಾಜ್ಯ ಸಚಿವ ರಾಮ್‍ದಾಸ್ ಅಠಾವಲೆ, ಲೋಕಸಭಾ ಸದಸಸ್ಯರಾದ ಡಿ. ವಿ. ಸದಾನಂದ ಗೌಡ, ಸುಮಲತಾ ಮತ್ತು ಪಿ ಸಿ ಮೋಹನ್, ರಾಜ್ಯ ಸಭಾಸದಸ್ಯ ಕೆ ಸಿ ರಾಮಮೂರ್ತಿ, ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯಸಭೆಯ ಪತ್ರಿಪಕ್ಷ ನಾಯಕ ಎಂ ಮಲ್ಲಿಕಾರ್ಜುನ ಖರ್ಗೆ ಮುಂತಾದವರು ಭಾಗವಹಿಸಿದ್ದರು.
ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆ ಹಾಗೂ ಸಿಎಂ ಯಡಿಯೂರಪ್ಪ ಮಾತುಕತೆ ನಡೆಸಿದರು. ಅದಲ್ಲದೆ ಸಿದ್ದರಾಮಯ್ಯ ಅವರು ಸಚಿವ ಈಶ್ವರಪ್ಪ ಮತ್ತು ಸಂಸದೆ ಸುಮಲತಾ ಅವರೊಂದಿಗೆ ಮಾತಕತೆ ನಡೆಸಿದರು. ಒಟ್ಟಿನಲ್ಲಿ ನೂತನ ರಾಜ್ಯಪಾಲರ ಪ್ರಮಾಣ ವಚನ ಕಾರ್ಯಕ್ರಮ ರಾಜ್ಯ ನಾಯಕರ ಸಮಾಗಮಕ್ಕೆ ಕಾರಣವಾಯಿತು.