Advertisement

ಇಂದು ವಿಶ್ವಾಸಮತಕ್ಕೆ ರಾಜ್ಯಪಾಲರ ಸೂಚನೆ

03:05 AM Jul 19, 2019 | sudhir |

ಬೆಂಗಳೂರು: ವಿಧಾನಸಭೆಯಲ್ಲಿ ಗುರುವಾರ ನಡೆದ ವಿದ್ಯಮಾನಗಳ ಬೆನ್ನಲ್ಲೇ ರಾಜ್ಯಪಾಲ ವಜೂಭಾç ವಾಲಾ ಅವರು ಮಧ್ಯಪ್ರವೇಶ ಮಾಡಿದ್ದು, ಶುಕ್ರವಾರ ಅಪರಾಹ್ನ 1.30ರೊಳಗೆ ವಿಶ್ವಾಸಮತ ಸಾಬೀತುಪಡಿಸಿ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರಿಗೆ ಸೂಚನೆ ನೀಡಿದ್ದಾರೆ.

Advertisement

ಮುಖ್ಯಮಂತ್ರಿಯವರಿಗೆ ನಿರ್ದೇಶನ ನೀಡುವ ಅಧಿಕಾರ ರಾಜ್ಯಪಾಲರಿಗೆ ಇರುವ ಹಿನ್ನೆಲೆಯಲ್ಲಿ ಈ ನಿರ್ದೇಶನ ನೀಡಲಾಗಿದ್ದು, ಈಗ ಸಮ್ಮಿಶ್ರ ಸರಕಾರ ತೀವ್ರ ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ಹದಿನೈದು ಜನ ಶಾಸಕರು ರಾಜೀನಾಮೆ ಕೊಟ್ಟು ನಿಮ್ಮ ಸರಕಾರಕ್ಕೆ ಬೆಂಬಲ ವಾಪಸ್‌ ಪಡೆದಿದ್ದಾರೆ. ಹೀಗಾಗಿ ನೀವು ನಾಳೆಯೇ ವಿಶ್ವಾಸಮತ ಸಾಬೀತುಪಡಿಸಿ ಎಂದು ಮುಖ್ಯಮಂತ್ರಿಯವರಿಗೆ ಬರೆದಿರುವ ಪತ್ರದಲ್ಲಿ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಈಗ ಏನು ಮಾಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಗುರುವಾರವೇ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸುವಂತೆ ರಾಜ್ಯಪಾಲರು ಸ್ಪೀಕರ್‌ ರಮೇಶ್‌ ಕುಮಾರ್‌ ಅವರಿಗೆ ಸಂದೇಶ ರವಾನಿಸಿದ್ದರು. ಆದರೆ ಗದ್ದಲ-ಪ್ರತಿಭಟನೆ ಹಿನ್ನೆಲೆಯಲ್ಲಿ ಸದನ ಮುಂದೂಡಿಕೆಯಾಯಿತು.

ರಾಜ್ಯಪಾಲರ ವಿಶೇಷ ಅಧಿಕಾರಿ ಗುರುವಾರ ಇಡೀ ದಿನ ಸದನದಲ್ಲಿದ್ದು ಕಲಾಪ ವೀಕ್ಷಿಸಿದರು. ಅದರ ಮಾಹಿತಿ ಹಾಗೂ ಬಿಜೆಪಿ ನಿಯೋಗದ ದೂರಿನ ಮೇರೆಗೆ ರಾಜ್ಯಪಾಲರು ಮುಖ್ಯಮಂತ್ರಿಯವರಿಗೆ ಶುಕ್ರವಾರ ಅಪರಾಹ್ನ 1.30ರ ಒಳಗೆ ವಿಶ್ವಾಸಮತ ಸಾಬೀತು ಮಾಡುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಬಿಜೆಪಿ ಸ್ನೇಹಿತರು ರಾಜ್ಯಪಾಲರ ಮೇಲೆ ಒತ್ತಡ ಹಾಕಿ ಶುಕ್ರವಾರ ಅಪರಾಹ್ನ 1.30ರೊಳಗೆ ವಿಶ್ವಾಸಮತ ಸಾಬೀತು ಪಡಿಸು ವಂತೆ ಮುಖ್ಯಮಂತ್ರಿಯವರಿಗೆ ಕಾಗದ ಬರೆಸಿದ್ದಾರೆ.
– ಡಿ.ಕೆ. ಶಿವಕುಮಾರ್‌, ಜಲಸಂಪನ್ಮೂಲ ಸಚಿವ

Advertisement

ಆದೇಶ ಪಾಲನೆ ಅನಿವಾರ್ಯ
ಮುಖ್ಯಮಂತ್ರಿಯವರಿಗೆ ನಿರ್ದೇಶನ ನೀಡುವ ಪರಮ ಅಧಿಕಾರ ರಾಜ್ಯಪಾಲರಿಗಿದೆ ಎಂದು ಮಾಜಿ ಅಡ್ವೊಕೇಟ್‌ ಜನರಲ್‌ ಅಶೋಕ್‌ ಹಾರನಹಳ್ಳಿ ಹೇಳಿದ್ದಾರೆ. ಸರಕಾರ ಅಲ್ಪಮತಕ್ಕೆ ಕುಸಿದಿದೆ ಎಂಬ ಅನುಮಾನ ರಾಜ್ಯಪಾಲರಿಗೆ ಮೂಡಿರಬಹುದು ಅಥವಾ ಮನವರಿಕೆ ಆಗಿರಬಹುದು. ಅದರಂತೆ ಶುಕ್ರವಾರ ಅಪರಾಹ್ನ 1.30ರೊಳಗೆ ವಿಶ್ವಾಸಮತ ಸಾಬೀತುಪಡಿಸುವಂತೆ ನಿರ್ದೇಶನ ನೀಡಿರುವುದು ಸರಿಯಾಗಿದೆ. ಒಂದೊಮ್ಮೆ ರಾಜ್ಯಪಾಲರ ಆದೇಶ ಧಿಕ್ಕರಿಸಿದರೆ ಇನ್ನಷ್ಟು ಬಿಕ್ಕಟ್ಟು ಹಾಗೂ ಗಂಭೀರ ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next