Advertisement

Governer Vs Government: 11 ಮಸೂದೆ ವಾಪಸ್‌; ಕಾಂಗ್ರೆಸ್‌ ಕೆಂಡಾಮಂಡಲ

12:52 AM Aug 24, 2024 | Team Udayavani |

ಬೆಂಗಳೂರು: ರಾಜ್ಯಪಾಲರು ಮತ್ತು ಸರಕಾರದ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು ಅನುಮೋದನೆಗೆ ಕಳುಹಿಸಿದ 11 ಮಸೂದೆಗಳನ್ನು ವಾಪಸ್‌ ಕಳುಹಿಸಿರುವ ರಾಜ್ಯಪಾಲರ ಕ್ರಮ ಈಗ ಕಾಂಗ್ರೆಸ್‌ ನಾಯಕರನ್ನು ಕೆಂಡಾಮಂಡಲ ಆಗುವಂತೆ ಮಾಡಿದೆ.

Advertisement

ರಾಜ್ಯಪಾಲರ ಈ ಕ್ರಮದ ವಿರುದ್ಧ ತಿರುಗಿಬಿದ್ದಿರುವ ಸಚಿವರು ಮತ್ತು ಕಾಂಗ್ರೆಸ್‌ ಶಾಸಕರು, ಬಿಜೆಪಿ ಶಾಸಕರ ಮಾತು ಕೇಳಿ ರಾಜ್ಯಪಾಲರು ಮಸೂದೆಗಳನ್ನು ವಾಪಸ್‌ ಕಳುಹಿಸಿದ್ದಾರೆ. ಇದು ಸರಿಯಾದ ಕ್ರಮ ಅಲ್ಲ. ಏನಾದರೂ ಸ್ಪಷ್ಟನೆ ಕೇಳಿದರೆ ನೀಡಬಹುದು. ಆದರೆ, ಹೀಗೆ ವಾಪಸ್‌ ಕಳುಹಿಸುವುದು ಎಷ್ಟು ಸರಿ? ಉಭಯ ಸದನಗಳಲ್ಲಿ ಅಂಗೀಕಾರವಾದ ಮಸೂದೆಗಳಿಗೆ ಅಂಕಿತ ಹಾಕಿ ಸುಗಮ ಆಡಳಿತಕ್ಕೆ ಅನುವು ಮಾಡಿಕೊಡಬೇಕು. ಇಲ್ಲವಾದರೆ ಜನರ ಆಶೋತ್ತರಗಳನ್ನು ಈಡೇರಿಸುವ ಸಲುವಾಗಿ ಅನಿವಾರ್ಯವಾಗಿ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ಬಿಜೆಪಿಯ ಶಾಸಕರ ಮಾತು ಕೇಳಿ 11 ಮಸೂದೆಗಳನ್ನು ರಾಜ್ಯಪಾಲರು ವಾಪಸ್‌ ಕಳುಹಿಸಿದ್ದಾರೆ. ಬಿಜೆಪಿಯವರ ಮಾತನ್ನೇ ಕೇಳುವುದಾದರೆ ಪ್ರಜಾಪ್ರಭುತ್ವ
ವ್ಯವಸ್ಥೆಯಲ್ಲಿ ಸರಕಾರಗಳು ಏಕಿರಬೇಕು. ಏನಾದರೂ ಸ್ಪಷ್ಟನೆ ಕೇಳಿದರೆ ನೀಡೋಣ. ಅದನ್ನು ತಪ್ಪು ಎಂದು ಹೇಳಲಾಗುವುದಿಲ್ಲ. ರಾಜ್ಯಪಾಲರಿಗೆ ದೇವರು ಒಳ್ಳೆ ಬುದ್ಧಿ ಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ತೀಕ್ಷ್ಣವಾಗಿ ಹೇಳಿದರು. ಜಿಂದಾಲ್‌ಗೆ ಭೂಮಿ ಮಾರಾಟ ಮಾಡಿದ್ದನ್ನು ಈ ಹಿಂದೆ ವಿರೋಧಿಸಿದ್ದ ಕಾಂಗ್ರೆಸ್‌ ಅದೇ ಜಿಂದಾಲ್‌ಗೆ ಭೂಮಿ ಮಾರಾಟ ಮಾಡಿದೆ ಎಂದು ಕೇಳಿದಾಗ, ಬಿಜೆಪಿಯವರು ಮಾಡಿದ್ದನ್ನು ನಾವು ಸರಿ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದರು.

ಸ್ಪಷ್ಟನೆ ಕೇಳುವ ಹಕ್ಕಿದೆ
ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ರಾಜ್ಯಪಾಲರಿಗೆ ಮಸೂದೆಗಳ ಕುರಿತು ಸ್ಪಷ್ಟನೆ ಕೇಳುವ ಹಕ್ಕಿದೆ. ಅದಕ್ಕೆ ಸರಕಾರ ಕೂಡ ಸೂಕ್ತ ಉತ್ತರ ನೀಡುತ್ತದೆ. ಆದರೆ ಸ್ಪಷ್ಟನೆಯನ್ನೂ ಕೇಳದೆ ವಾಪಸ್‌ ಕಳುಹಿಸುವುದು ಸರಿಯಾದ ಕ್ರಮ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವಿಪಕ್ಷ ನಾಯಕರಂತೆ ವರ್ತನೆ
ವಿಧಾನ ಪರಿಷತ್ತಿನ ಕಾಂಗ್ರೆಸ್‌ ಸದಸ್ಯರಾದ ಮಂಜುನಾಥ ಭಂಡಾರಿ, ಎಸ್‌. ರವಿ, ಅನಿಲ್‌ ಕುಮಾರ್‌, ರಾಜೇಂದ್ರ ರಾಜಣ್ಣ, ದಿನೇಶ್‌ ಗೂಳಿಗೌಡ, ಸುನಿಲ್‌ಗೌಡ ಪಾಟೀಲ್‌, ಚಂದ್ರಶೇಖರ ಪಾಟೀಲ, ಚೆನ್ನರಾಜು, ಮಧು ಮಾದೇಗೌಡ, ಡಾ| ತಿಮ್ಮಯ್ಯ, ರಾಮೋಜಿ ಗೌಡ , ಡಿ.ಟಿ. ಶ್ರೀನಿವಾಸ, ಶರಣಗೌಡ ಪಾಟೀಲ, ಭೀಮರಾವ್‌ ಪಾಟೀಲ. ತಿಪ್ಪಣ್ಣಾ ಕಮಕನೂರು ಜಂಟಿ ಪತ್ರಿಕಾ ಹೇಳಿಕೆ ನೀಡಿ, ರಾಜ್ಯಪಾಲರ ನಡೆ ಬಗ್ಗೆ ದನಿ ಎತ್ತಿದ್ದಾರೆ.

Advertisement

ರಾಜ್ಯಪಾಲರು ವಾಪಸ್‌ ಕಳುಹಿಸಿ ವಿಪಕ್ಷದ ನಾಯಕರಂತೆ ವರ್ತಿಸುತ್ತಿದ್ದಾರೆ. ಬಹುಮತದ ಸರಕಾರ ಶಾಸನ ರೂಪಿಸುತ್ತದೆ. ಅದು, ಕೆಳಮನೆ, ಮೇಲ್ಮನೆಯಲ್ಲಿ ಚರ್ಚೆಯಾಗಿ ಅಂಗೀಕಾರವಾಗಬೇಕು. ಅದನ್ನು ರಾಜ್ಯಪಾಲರು ತಮ್ಮ ಅಂಕಿತದೊಂದಿಗೆ ಅಂಗೀಕರಿಸಬೇಕು, ಅನಂತರ ಕಾಯ್ದೆ ಜಾರಿಯಾಗಬೇಕು ಎಂಬುದು ಕ್ರಮ. ಅದಕ್ಕೆ ಅಡ್ಡಿಪಡಿಸುವುದು ಸಮಂಜಸವಲ್ಲ. ಈ ರೀತಿ ಮಾಡುವುದರಿಂದ ಶಾಸಕ ಸಭೆಗಳ ಮಹತ್ವ ಕಡಿಮೆ ಆಗುತ್ತದೆ. ಒಕ್ಕೂಟದ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಇದರಲ್ಲಿ ರಾಜಕೀಯದ ದುರುದ್ದೇಶ ಕಾಣುತ್ತಿದೆ ಎಂದು ಪ್ರಕಟನೆಯಲ್ಲಿ ಆರೋಪಿಸಿದ್ದಾರೆ.

ಇದೇನು ಹೊಸದಲ್ಲ: ಸುನೀಲ್‌ ಕುಮಾರ್‌
ಬಿಲ್‌ಗ‌ಳನ್ನು ವಾಪಸ್‌ ಕಳುಹಿಸಿದ್ದಾರೆಂದು ರಾಜ್ಯಪಾಲರ ಬಗ್ಗೆ ಸಚಿವರು ಎಲ್ಲೇ  ಮೀರಿ ಮಾತಾಡಿದ್ದಾರೆ. ಹಿಂದೆಯೂ ರಾಜ್ಯಪಾಲರು ಹಲವು ಸಲ ಮಸೂದೆ ವಾಪಸ್‌ ಕಳುಹಿಸಿರುವ ಉದಾಹರಣೆಗಳಿವೆ. ಯಾವ ಮಸೂದೆ ಜನಪರವಾಗಿ ಇರುತ್ತೋ ಅದನ್ನು ರಾಜ್ಯಪಾಲರು ಅಂಗೀಕಾರ ಮಾಡಿ ಕಳುಹಿಸುತ್ತಾರೆ. ಯಾವುದಾದರೂ ಅನುಮಾನ ಇದ್ದರೆ, ಏಕ ಪಕ್ಷೀಯವಾಗಿ ಇರಬಹುದೆಂದು ವಾಪಸ್‌ ಕಳುಹಿಸುತ್ತಾರೆ. ಇದೇನು ಹೊಸತಲ್ಲ ಎಂದು ಬಿಜೆಪಿ ಶಾಸಕ ಸುನೀಲ್‌ಕುಮಾರ್‌ ಹೇಳಿದ್ದಾರೆ.

ಯಾವ್ಯಾವ ಮಸೂದೆ ವಾಪಸ್‌?
ಕರ್ನಾಟಕ ಸಾರ್ವಜನಿಕ ಭ್ರಷ್ಟಾಚಾರ ತಡೆ ಮಸೂದೆ, ಕರ್ನಾಟಕ ಧಾರ್ಮಿಕ ದತ್ತಿ ತಿದ್ದುಪಡಿ ವಿಧೇಯಕ, ಕರ್ನಾಟಕ ನಗರ ಮತ್ತು ಪಟ್ಟಣ ಯೋಜನೆ ಮಸೂದೆ(ಟೌನ್‌ ಆ್ಯಂಡ್‌ ಕಂಟ್ರಿ ಪ್ಲಾನಿಂಗ್‌), ಕರ್ನಾಟಕ ಶಾಸಕಾಂಗ ಸದಸ್ಯರ ಅನರ್ಹತೆ ತಡೆ ಮಸೂದೆ, ಕರ್ನಾಟಕ ಪುರಸಭೆಗಳು ಮತ್ತು ಇತರ ಕೆಲವು ಕಾನೂನು ಮಸೂದೆ, ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಲಾವಿದರ ಕಲ್ಯಾಣ ಮಸೂದೆ, ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ಮಸೂದೆ, ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಮಸೂದೆ, ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಮಸೂದೆ, ಗದಗ ಬೆಟಗೇರಿ ವ್ಯಾಪಾರ ಸಂಸ್ಕೃತಿ ಪ್ರದರ್ಶನ ಪ್ರಾಧಿಕಾರ ಮಸೂದೆ, ಕರ್ನಾಟಕ ನೋಂದಣಿ ತಿದ್ದುಪಡಿ ಮಸೂದೆಗಳನ್ನು ರಾಜ್ಯಪಾಲರು ಇದುವರೆಗೆ ವಾಪಸ್‌ ಮಾಡಿದ್ದಾರೆ ಎಂದು ವಿಧಾನ ಪರಿಷತ್ತಿನ ಕಾಂಗ್ರೆಸ್‌ ಸದಸ್ಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.