ಮೂಡುಬಿದಿರೆ: ಕಾರ್ಕಳ ಉತ್ಸವಕ್ಕೆ ಹೋಗುವ ಹಾದಿಯಲ್ಲಿ ಸೋಮವಾರ ಅಪರಾಹ್ನ ಮೂಡುಬಿದಿರೆಗೆ ಆಗಮಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಜೈನ ಮಠ ಮತ್ತು ಸಾವಿರ ಕಂಬದ ಬಸದಿಗೆ ಭೇಟಿ ನೀಡಿ ದರು. ಶ್ರೀ ಜೈನಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾ ಚಾರ್ಯವರ್ಯ ಸ್ವಾಮೀಜಿ ರಾಜ್ಯಪಾಲರನ್ನು ಗೌರವಿಸಿದರು.
ಬಸದಿಗಳ ನಾಮಫಲಕ ಅನಾವರಣಗೊಳಿಸಿದ ರಾಜ್ಯ ಪಾಲರು, ತಮ್ಮ ಊರಾದ ಮಧ್ಯಪ್ರದೇಶದಲ್ಲಿರುವ ಜೈನ ಸಮುದಾಯದೊಂದಿಗೆ ಹೊಂದಿರುವ ನಿಕಟ ಸಂಪರ್ಕವನ್ನು ಸ್ಮರಿಸಿ, ಸಾವಿರಾರು ವರ್ಷಗಳಿಂದ ಮಹಾಪುರುಷರು ಆಗಮಿಸಿ, ಹರಸಿದ ಧಾರ್ಮಿಕ, ಐತಿಹಾಸಿಕ ನಗರವಾಗಿರುವ ಮೂಡುಬಿದಿರೆಯ ದರ್ಶನದಿಂದ ಮನಸ್ಸು ಪ್ರಸನ್ನಗೊಂಡಿದೆ ಎಂದರು.
ರಾಜ್ಯಪಾಲರಿಗೆ ಸ್ವಾಗತ: ಬಸದಿಗಳ ಮೊಕ್ತೇಸರ ಪಟ್ಣಶೆಟ್ಟಿ ಸುಧೇಶ್ ಕುಮಾರ್ ರಾಜ್ಯಪಾಲರಿಗೆ ಹಾರ ತೊಡಿಸಿ ಕ್ಷೇತ್ರಕ್ಕೆ ಬರಮಾಡಿಕೊಂಡರು. ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಸದಸ್ಯರು, ಮುಖ್ಯಾಧಿಕಾರಿ ಇಂದು ಎಂ. ಸಹಿತ ಸಿಬಂದಿ “ಸಾವಿರ ಕಂಬದ ಬಸದಿ’ಯ ಚಿತ್ರಫಲಕವನ್ನು ಸ್ಮರಣಿಕೆಯಾಗಿ ರಾಜ್ಯಪಾಲರಿಗಿತ್ತು ಅಭಿವಂದಿಸಿದರು.
ಮಾಜಿ ಸಚಿವ ಕೆ. ಅಭಯಚಂದ್ರ ಅವರು ಹೂಗುತ್ಛ ನೀಡಿದರು. ಚೌಟರ ಅರಮನೆ ಕುಲದೀಪ ಎಂ. ಮೊಕ್ತೇಸರರಾದ ಆನಡ್ಕ ದಿನೇಶ್ ಕುಮಾರ್, ಆದರ್ಶ್ ಅರಮನೆ, ಮಂಗಳೂರು ಎಪಿಎಂಸಿ ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ, ರಾಷ್ಟ್ರೀಯ ಅಂಗಾಂಗದಾನ ಫೌಂಡೇಶನ್‌ನ ಅಧ್ಯಕ್ಷ ಲಾಲ್ ಗೋಯೆಲ್, ಜೈನ್ ಮಿಲನ್ ಅಧ್ಯಕ್ಷ ನೇಮಿರಾಜ ಜೈನ್, ಮಾಜಿ ಅಧ್ಯಕ್ಷೆ ಶ್ವೇತಾ ಜೈನ್, ಡಾ| ಎಸ್.ಪಿ. ವಿದ್ಯಾಕುಮಾರ್ ಉಪಸ್ಥಿತರಿದ್ದರು. ಶ್ರೀ ಮಠದಲ್ಲಿ ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಸ್ವಾಗತಿಸಿದರು. ಪ.ಪೂ. ಕಾಲೇಜು ಪ್ರಾಂಶುಪಾಲೆ ಸೌಮ್ಯಾ ನಿರೂಪಿಸಿ, ಸಂಜಯಂತ ಕುಮಾರ್ ವಂದಿಸಿದರು.