Advertisement

Kharge ಟ್ರಸ್ಟ್‌ಗೆ ಜಮೀನು ಹೇಗೆ ಕೊಟ್ಟಿದ್ದೀರಿ: ರಾಜ್ಯಪಾಲರ ಪ್ರಶ್ನೆ

12:54 AM Sep 03, 2024 | Team Udayavani |

ಬೆಂಗಳೂರು: ಸಿಎಂ ವಿರುದ್ಧ ಮುಡಾ ಪ್ರಕರಣದ ಅಭಿಯೋಜನೆಗೆ ಅನುಮತಿ ನೀಡಿದ್ದ ರಾಜ್ಯಪಾಲರು ಈಗ ಸಚಿವರಾದ ಪ್ರಿಯಾಂಕ್‌ ಖರ್ಗೆ, ಎಂ.ಬಿ. ಪಾಟೀಲ್‌ ವಿರುದ್ಧದ ದೂರು ಆಧರಿಸಿ ಸರಕಾರದಿಂದ ವಿವರಣೆ ಕೇಳಿದ್ದಾರೆ. ಈ ಮೂಲಕ ರಾಜ್ಯ ಸರಕಾರ ಹಾಗೂ ರಾಜ ಭವನದ ನಡುವಣ ಸಂಘರ್ಷ ಮತ್ತೆ ಮುನ್ನೆಲೆಗೆ ಬಂದಿದೆ.

Advertisement

ಇತ್ತೀಚೆಗಷ್ಟೇ ಕೇಂದ್ರ ಸಚಿವ ಕುಮಾರಸ್ವಾಮಿ ಇಬ್ಬರು ಮಾಜಿ ಸಚಿವರ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡುವಂತೆ ಕಾಂಗ್ರೆಸ್‌ ಶಾಸಕರು, ಸಂಸದರು ರಾಜಭವನ ಚಲೋ ನಡೆಸಿದ್ದರು.

ಅಂತಹ ಕಡತಗಳು ತಮ್ಮ ಬಳಿ ಇಲ್ಲ, ಸ್ಪಷ್ಟನೆ ಕೇಳಿ ಸಂಬಂಧಿಸಿದವರಿಗೆ ರವಾನಿಸಿರುವುದಾಗಿ ಕಾಂಗ್ರೆಸ್‌ ನಿಯೋಗಕ್ಕೆ ರಾಜ್ಯಪಾಲರು ತಿಳಿಸಿದ್ದರು.

ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದ ನಿಯೋಗವು ನೀಡಿದ್ದ ಪತ್ರದಲ್ಲಿ ರಾಜ್ಯಪಾಲರ ಕಾರ್ಯವೈಖರಿಯನ್ನು ಟೀಕಿಸಲಾಗಿತ್ತಲ್ಲದೆ, ಹೇಗೆ ಕೆಲಸ ಮಾಡಬೇಕೆಂಬ ನೀತಿಪಾಠವನ್ನೂ ಮಾಡಲಾಗಿತ್ತು. ಇದರಿಂದ ರಾಜ್ಯಪಾಲರು ಗರಂ ಆಗಿದ್ದರು.

ಇವೆಲ್ಲವುಗಳ ಬೆನ್ನಲ್ಲೇ ಸರಕಾರದ ಇಬ್ಬರು ಸಚಿವರಿಗೆ ಈಗ ಆಘಾತ ನೀಡಿರುವ ರಾಜ್ಯಪಾಲರು, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯಿಂದ ಖರ್ಗೆ ಕುಟುಂಬದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಡಿಫೆನ್ಸ್‌ ಏರೋಸ್ಪೇಸ್‌ ಪಾರ್ಕ್‌ನಲ್ಲಿ ನಾಗರಿಕ ಹಕ್ಕಿನ (ಸಿಎ) ನಿವೇಶನವನ್ನು ಎಸ್‌ಸಿ ಕೋಟಾದಡಿ ಮಂಜೂರು ಮಾಡಿರುವ ಬಗ್ಗೆ ಸರಕಾರದಿಂದ ವಿವರಣೆ ಕೇಳಿದ್ದಾರೆ.

Advertisement

ಸರಕಾರದ ಸ್ಪಷ್ಟನೆ ಏನು?
ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಈ ಕುರಿತು ರಾಜಭವನದಿಂದ ಪತ್ರ ರವಾನೆಯಾಗಿದ್ದು, ಈ ಪ್ರಕರಣದಲ್ಲಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲರ ಪಾತ್ರ ಏನು, ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆಯವರ ಪಾತ್ರವೇನು ಎಂಬ ಬಗ್ಗೆ ವಿವರಣೆ ಕೇಳಲಾಗಿದೆ. ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಳ್ಳಿ ಹಾಗೂ ವಿಧಾನಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಂದ ದೂರು ಸ್ವೀಕಾರವಾಗಿದ್ದು, ಈ ಕುರಿತು ಸರಕಾರದ ಬಳಿ ಯಾವ ಮಾಹಿತಿ ಇದೆ, ಏನು ಸ್ಪಷ್ಟನೆ ಇದೆ ಎಂದು ಕೇಳಲಾಗಿದೆ.

ಸಚಿವ ಪ್ರಿಯಾಂಕ್‌ ಗರಂ
ರಾಜ್ಯಪಾಲರ ವಿರುದ್ಧ ಹರಿಹಾಯ್ದಿರುವ ಸಚಿವ ಪ್ರಿಯಾಂಕ್‌ ಖರ್ಗೆ, ದೂರು ಕೊಡುವುದು, ವಿವರಣೆ ಕೇಳಿರುವುದು ಎಲ್ಲವೂ ಮಿಂಚಿನ ವೇಗದಲ್ಲಿ ಆಗಿದೆ. ಕಾಂಗ್ರೆಸ್‌ನವರ ವಿಚಾರ ಬಂದಾಕ್ಷಣ ರಾಜ್ಯಪಾಲರ ಕಚೇರಿ ಸಕ್ರಿಯವಾಗಿಬಿಡುತ್ತದೆ. ಮಿಂಚಿನ ವೇಗದಲ್ಲಿ ವಿವರಣೆ ಕೇಳುತ್ತಾರೆ. ಬಿಜೆಪಿ-ಜೆಡಿಎಸ್‌ ನಾಯಕರದ್ದಾದರೆ ಆಮೆಗತಿಯಲ್ಲಿರುತ್ತದೆ. ಅವರ ಮೇಜಿನ ಮೇಲೆ ಕಡತಗಳು ಕೊಳೆಯುತ್ತಿದ್ದರೂ ಕೇಳಿಲ್ಲ. ಸುಮ್ಮನೆ ಬೇಕೆಂದು ಕೆಲವಕ್ಕೆ ಸ್ಪಷ್ಟನೆ ಕೇಳಿದ್ದಾರಷ್ಟೆ. ತನ್ನ ಬಳಿ ಇಲ್ಲ ಎಂದು ತಪ್ಪು ಮಾಹಿತಿ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ರಾಜ್ಯಪಾಲರ ಪ್ರಕಾರ ಕಾಂಗ್ರೆಸಿಗೊಂದು, ಬಿಜೆಪಿ-ಜೆಡಿಎಸ್‌ಗೊಂದು- ಎರಡು ಸಂವಿಧಾನ ಇದೆ. ಈ ಆರೋಪಗಳಿಗೆಲ್ಲ ನಾನೂ ಸ್ಪಷ್ಟನೆ ಕೊಟ್ಟಿದ್ದೇನೆ, ಸಚಿವ ಎಂ.ಬಿ. ಪಾಟೀಲರೂ ಸ್ಪಷ್ಟನೆ ಕೊಟ್ಟಿದ್ದಾರೆ ಎಂದಿದ್ದಾರೆ.

ಖರ್ಗೆ ಕುಟುಂಬ ಟ್ರಸ್ಟ್‌ಗೆ 19 ಎಕರೆ ಉಚಿತ ಭೂಮಿ: ಲೆಹರ್‌ ಸಿಂಗ್‌

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಮೇಲೆ ಮತ್ತೂಂದು ಆರೋಪ ಎರಗಿದ್ದು, ಸಿದ್ಧಾರ್ಥ ವಿಹಾರ ಟ್ರಸ್ಟ್‌ ನಡೆಸುತ್ತಿರುವ ಸಂಸ್ಥೆಗೆ 19 ಎಕರೆ ಸರಕಾರಿ ಭೂಮಿಯನ್ನು ಉಚಿತವಾಗಿದೆ ಕೊಡಲಾಗಿದೆ ಎಂದು ಬಿಜೆಪಿ ಸಂಸದ ಲೆಹರ್‌ ಸಿಂಗ್‌ ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್‌ ಖಾತೆಯಲ್ಲಿ ದಾಖಲೆ ಹಂಚಿ ಕೊಂಡಿರುವ ಅವರು, ಬೆಂಗಳೂರು ಸಮೀಪದ ಡಿಫೆನ್ಸ್‌ ಏರೋಸ್ಪೇಸ್‌ ಪಾರ್ಕ್‌ನಲ್ಲಿ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ 5 ಎಕರೆ ಸಿಎ ನಿವೇಶನ ಕೊಟ್ಟಿರುವ ಸರಕಾರ, ಅದೇ ಟ್ರಸ್ಟ್‌ನ ಭಾಗವಾಗಿರುವ ಖರ್ಗೆ ಅವರ ಅಳಿಯ ಹಾಗೂ ಕಲಬುರಗಿ ಸಂಸದ ರಾಧಾಕೃಷ್ಣ ಕಾರ್ಯದರ್ಶಿಯಾಗಿರುವ ಕಲಬುರಗಿಯ ಪಾಲಿ, ಸಂಸ್ಕೃತ ಮತ್ತು ತತ್ತಶಾಸ್ತ್ರದ ಅಂತಾರಾಷ್ಟ್ರೀಯ ಸಂಸ್ಥೆಗೆ 19 ಎಕರೆ ಸರ್ಕಾರಿ ಜಾಗವನ್ನು ಮಂಜೂರು ಮಾಡಿದೆ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ 2014ರ ಮಾರ್ಚ್‌ನಲ್ಲಿ 16 ಎಕರೆ ಸರಕಾರಿ ಭೂಮಿಯನ್ನು 30 ವರ್ಷಗಳ ಗುತ್ತಿಗೆಗೆ ಪಾಲಿ ಸಂಸ್ಥೆಗೆ ನೀಡಿತ್ತು. ಒಂದೆರಡು ವರ್ಷಗಳ ಬಳಿಕ 16 ಎಕರೆ ಜತೆಗೆ 3 ಎಕರೆ ಸೇರ್ಪಡೆಯಾಯಿತು. ಅಂತಿಮವಾಗಿ, 2017ರ ಮಾರ್ಚ್‌ನಲ್ಲಿ ಒಟ್ಟು 19 ಎಕರೆ ಜಮೀನನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ, ಖರ್ಗೆ ಕುಟುಂಬ ನಡೆಸುವ ಸಂಸ್ಥೆಗೆಉಚಿತವಾಗಿ ವರ್ಗಾಯಿಸಿತು. ಇದೆಲ್ಲವೂ ಖರ್ಗೆ ಕುಟುಂಬವನ್ನು ಮೆಚ್ಚಿಸಲು ಜನರಿಗೆ ಕಾಂಗ್ರೆಸ್‌ ಮಾಡುತ್ತಿರುವ ಮೋಸ ಎಂದು ಸಿಂಗ್‌ ಆಪಾದಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next