Advertisement

Joint Session; ರಾಜ್ಯಪಾಲರ ಭಾಷಣದಲ್ಲೂ ಕರ ಬರ ಸಮರ

12:25 AM Feb 13, 2024 | Team Udayavani |

ಬೆಂಗಳೂರು: ತೆರಿಗೆ ಪಾಲು ಹಾಗೂ ಬರ ಪರಿಹಾರ ವಿಚಾರಕ್ಕೆ ಸಂಬಂಧಪಟ್ಟಂತೆಯೂ ರಾಜ್ಯಪಾಲರ ಭಾಷಣದ ಮೂಲಕವೂ ರಾಜ್ಯ ಸರಕಾರವು ಕೇಂದ್ರದ ವಿರುದ್ಧ ಆಕ್ರೋಶ ಮುಂದುವರಿಸಿದೆ.

Advertisement

ರಾಜ್ಯಪಾಲರ ಭಾಷಣದಲ್ಲಿ ಈ ಎರಡು ವಿಚಾರವನ್ನು ಪ್ರಬಲವಾಗಿ ಪ್ರತಿಪಾದಿಸಲಾಗಿದ್ದು, ರಾಜ್ಯಕ್ಕೆ ನ್ಯಾಯ ಮತ್ತು ಧರ್ಮದ ರೀತಿಯಲ್ಲಿ ಸಿಗಬೇಕಾದ ತೆರಿಗೆ ಪಾಲನ್ನು ಪಡೆಯಲು ಎಲ್ಲ ಪ್ರಯತ್ನವನ್ನೂ ಮಾಡಲಾಗುತ್ತದೆ ಎಂದುಉಲ್ಲೇಖಿಸಲಾಗಿದೆ. “ನನ್ನ ಸರಕಾರ ಇನ್ನಷ್ಟು ಜನೋಪಯೋಗಿ ಜನಪರ ಯೋಜನೆಗಳನ್ನು ಅನುಷ್ಠಾನ ಮಾಡಲು ಸಿದ್ಧವಿದೆ. ಆದರೆ ವಿವಿಧ ಮೂಲಗಳಿಂದ ಸಿಗಬೇಕಾದಷ್ಟು ಸಂಪನ್ಮೂಲ ಸಿಗುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಲಾಗಿದೆ.

ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿ ಕೊಡುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ ತೆರಿಗೆ ಪಾಲು ಪಡೆಯುವ ವಿಚಾರದಲ್ಲಿ 10ನೇ ಸ್ಥಾನದಲ್ಲಿದೆ.

ಈ ಹಿನ್ನೆಲೆಯಲ್ಲಿ ನಮಗೆ ನ್ಯಾಯ ಮತ್ತು ಧರ್ಮದ ರೀತಿಯಲ್ಲಿ ಸಿಗಬೇಕಾದ ಪಾಲನ್ನು ಪಡೆಯಲು ನನ್ನ ಸರಕಾರವು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತದೆ ಎಂಬ ಸಾಲನ್ನು ರಾಜ್ಯಪಾಲರು ಓದಿದ್ದಾರೆ. ಈ ಮೂಲಕ ಕೇಂದ್ರದ ಪ್ರತಿನಿಧಿಯ ಮೂಲಕವೇ ಕೇಂದ್ರ ಸರಕಾರದ ವಿರುದ್ಧ ಧ್ವನಿ ಎತ್ತಲಾಗಿದೆ.
ಬರ ಪೀಡಿತ ತಾಲೂಕುಗಳಲ್ಲಿ ಬರ ಪರಿಹಾರ ಕ್ರಮಗಳಿಗಾಗಿ ಎನ್‌ಡಿಆರ್‌ಎಫ್ನಿಂದ 18171.44 ಕೋಟಿ ರೂ. ಆರ್ಥಿಕ ನೆರವು ಕೋರಿ ಕೇಂದ್ರ ಸರಕಾರಕ್ಕೆ ಜ್ಞಾಪನ ಪತ್ರ ಕಳುಹಿಸಲಾಗಿದೆ.

ಆದರೆ ಇದುವರೆಗೆ ಯಾವುದೇ ಹಣ ಬಿಡುಗಡೆಯಾಗಿಲ್ಲ. ಬರ ಪರಿಹಾರವನ್ನು ತುರ್ತಾಗಿ ಬಿಡುಗಡೆ ಮಾಡಲು ರಾಜ್ಯ ಸರಕಾರ ಎಲ್ಲ ಪ್ರಯತ್ನ ಮಾಡುತ್ತಿದೆ. ಹಿಂದಿನ ವರ್ಷಗಳಲ್ಲಿ ನೀಡಿದ ಪರಿಹಾರಗಳಲ್ಲಿ ಮತ್ತು ಇನ್‌ಪುಟ್‌ ಸಬ್ಸಿಡಿಗಳಲ್ಲಿ ವ್ಯಾಪಕ ಅವ್ಯವಹಾರ ನಡೆದಿರುವುದು ನನ್ನ ಸರಕಾರದ ಗಮನಕ್ಕೆ ಬಂದಿದೆ. ಅರ್ಹ ರೈತರಿಗೆ ಪರಿಹಾರ ಸಿಗದೇ ಅನರ್ಹರಿಗೆ ಪರಿಹಾರ ನೀಡಲಾಗಿದೆ ಎಂದು ಹಿಂದಿನ ಬಿಜೆಪಿ ಸರಕಾರದ ಆಡಳಿತದ ವಿರುದ್ಧವೂ ಚಾಟಿ ಬೀಸಲಾಗಿದೆ. ಬರ ಪರಿಹಾರವಿರಲಿ, ಗ್ಯಾರಂಟಿ ಯೋಜನೆಗಳಿರಲಿ ಇವುಗಳನ್ನು ನನ್ನ ಸರಕಾರ ಹಕ್ಕುಗಳು ಎಂದು ಭಾವಿಸಿ ಕಾರ್ಯ ನಿರ್ವಹಿಸುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಲಾಗಿದೆ.

Advertisement

ಗೊಂದಲಗಳಿಲ್ಲದ ಗ್ಯಾರಂಟಿ ಜಾರಿ ಸಾರ್ವತ್ರಿಕ ದಾಖಲೆ
ಗ್ಯಾರಂಟಿ ಯೋಜನೆಯಿಂದ ಆರ್ಥಿಕತೆಗೆ ಹೊಸ ಉತ್ಸಾಹ ನೀಡಿದೆ ಎಂದು ಹೇಳಿರುವ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್, ದೇಶ-ವಿದೇಶಗಳಲ್ಲಿ ಮಾಧ್ಯಮಗಳು ಗ್ಯಾರಂಟಿ ಯೋಜನೆ ಬಗ್ಗೆ ಶ್ಲಾಘಿ ಸಿ, ಅಧ್ಯಯನ ಮಾಡುತ್ತಿವೆ. ಒಂದಿಷ್ಟೂ ಗೊಂದಲ, ಗೋಜಲಿಗೆ ಅವಕಾಶ ನೀಡದೆ ಗ್ಯಾರಂಟಿ ಜಾರಿ ಮಾಡಿರುವುದು ಸಾರ್ವತ್ರಿಕ ದಾಖಲೆ ಎಂದು ಬಣ್ಣಿಸಿದ್ದಾರೆ.

ಸೋಮವಾರದಿಂದ ಆರಂಭವಾದ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲರು, 1.17 ಕೋಟಿ ಮಹಿಳೆಯರಿಗೆ ಡಿಬಿಟಿ ಮೂಲಕ 11,037 ಕೋಟಿ ರೂ. ಗೃಹಲಕ್ಷ್ಮಿ ಮೊತ್ತ ವರ್ಗಾವಣೆಯಾಗಿದೆ. ಜನವರಿ ಅಂತ್ಯದವರೆಗೆ ಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ. 8 ತಿಂಗಳಲ್ಲಿ 77 ಸಾವಿರ ಕೋಟಿಗೂ ಅಧಿಕ ಬಂಡವಾಳ ರಾಜ್ಯಕ್ಕೆ ಹರಿದು ಬಂದಿದೆ. ಗ್ಯಾರಂಟಿ ಜತೆಗೆ ಇತರ ಕ್ಷೇತ್ರಗಳಲ್ಲೂ ಅಪ್ರತಿಮ ಸಾಧನೆಯಾಗಿದೆ. ಬಜೆಟ್‌ ಘೋಷಣೆಯ ಶೇ.97ರಷ್ಟು ಜಾರಿಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಹೇಳಿದರು.

ಚುನಾವಣೆಗೆ ಧರ್ಮ-ಜಾತಿ ಬಳಕೆಗೆ ಕಳವಳ
ನಮ್ಮ ಸಂವಿಧಾನದ ಪ್ರಕಾರ ಚುನಾವಣೆಗಳಲ್ಲಿ ಧರ್ಮ, ಜಾತಿ ಇತ್ಯಾದಿ ಬಳಕೆಗೆ ನಿರ್ಬಂಧವಿದೆ. ನಮ್ಮ ಎಲ್ಲ ಕಾರ್ಯಗಳು ಸಂವಿಧಾನಕ್ಕೆ ಅನುಗುಣವಾಗಿಯೇ ಇರುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು ಎಂದು ರಾಜ್ಯಪಾಲರ ಭಾಷಣದಲ್ಲಿ ಸರಕಾರಉಲ್ಲೇಖಿಸಿರುವುದು ಭಾರೀ ವಿವಾದ ಸೃಷ್ಟಿಸುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟುಕೊಂಡೇ ಈ ಸಾಲುಗಳನ್ನು ಪ್ರಸ್ತಾಪಿಸಲಾಗಿದೆ ಎಂಬ ವ್ಯಾಖ್ಯಾನ ಬಿಜೆಪಿ ವಲಯದಿಂದ ಕೇಳಿ ಬಂದಿದೆ. ಸಾಂವಿಧಾನಿಕ ಸಂಸ್ಥೆಗಳು ಯಾವುದೇ ಕಾರಣಕ್ಕೂ ದುರ್ಬಲವಾಗದಂತೆ ಅಥವಾ ದುರುಪಯೋಗವಾಗದಂತೆ ನಾವೆಲ್ಲರೂ ಸಂಕಲ್ಪ ಮಾಡಿ ರಕ್ಷಿಸಬೇಕಾಗಿದೆ. ನಮಗೆ ಸಂವಿಧಾನವೇ ರಾಷ್ಟ್ರೀಯ ಧರ್ಮ. ಸಂವಿಧಾನವನ್ನು ನಾವು ರಕ್ಷಿಸಿದರೆ ಸಂವಿಧಾನವು ನಮ್ಮನ್ನು ರಕ್ಷಿಸುತ್ತದೆ ಎಂಬ ದೃಢವಾದ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕೆಂದು ಉಲ್ಲೇಖೀಸಿರುವ ಅಂಶಗಳು ಕೂಡ ಕೇಂದ್ರದತ್ತ ಬೊಟ್ಟು ಮಾಡುತ್ತಿವೆ ಎಂಬ ಮಾತು ಕೇಳಿ ಬಂದಿದೆ.

ಅಗಲಿದ ಗಣ್ಯರಿಗೆ ಸಂತಾಪ
ಬೆಂಗಳೂರು: ಇತ್ತೀಚೆಗೆ ಅಗಲಿದ ಮಾಜಿ ಶಾಸಕ ನಾಗನಗೌಡ ಕಂದಕೂರು, ಮೇಲ್ಮನೆ ಮಾಜಿ ಸದಸ್ಯ ಮಾರುತಿರಾವ್‌ ಡಿ.ಮಾಲೆ, ಎಸ್‌.ಎ. ಜಿದ್ದಿ, ಸಾಹಿತಿ ಪ್ರೊ| ಅಮೃತ ಸೋಮೇಶ್ವರ, ಸರ್ವೋದಯ ಕಾರ್ಯಕರ್ತೆ ಚನ್ನಮ್ಮ ಹಳ್ಳಿಕೇರಿ, ಕರಡಿ ಮಜಲು ಕಲಾವಿದ ಗುರುಲಿಂಗಪ್ಪ ವೀರಸಂಗಪ್ಪ ಕರಡಿ ಅವರಿಗೆ ಉಭಯ ಸದನಗಳಲ್ಲಿ ಸಂತಾಪ ಸೂಚಿಸಲಾಯಿತು. ವಿಧಾನಸಭೆಯಲ್ಲಿ ಸ್ಪೀಕರ್‌ ಖಾದರ್‌ ಹಾಗೂ ವಿಧಾನ ಪರಿಷತ್ತಿನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂತಾಪ ಸೂಚನ ನಿರ್ಣಯ ಮಂಡಿಸಿದರು.

ಶಾಸಕರಿಗೆ ಬೆಳಗ್ಗೆ 8 ಗಂಟೆಗೆ ಉಪಾಹಾರ
ಬೆಂಗಳೂರು: ಅಧಿವೇಶನ ನಡೆಯುವ ಎಲ್ಲ ದಿನಗಳು ಪ್ರತಿನಿತ್ಯ ಬೆಳಗ್ಗೆ 8 ಗಂಟೆಯಿಂದ ಶಾಸಕರಿಗೆ ತಿಂಡಿ ವ್ಯವಸ್ಥೆ ಮಾಡಿರುವುದಾಗಿ ಸ್ಪೀಕರ್‌ ಯು.ಟಿ. ಖಾದರ್‌ ಪ್ರಕಟಿಸಿದರು. ಮೊಗಸಾಲೆಯಲ್ಲಿ ಬೆಳಗಿನ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಪೀಕರ್‌ ಪ್ರಕಟಿಸುತ್ತಿದ್ದಂತೆ, ಅಷ್ಟು ಬೇಗ ಯಾರು ಬರುತ್ತಾರೆ ಎಂದು ಶಾಸಕರು ಪ್ರಶ್ನಿಸಿದರು. ಎಲ್ಲರ ಆರೋಗ್ಯದ ದೃಷ್ಟಿಯಿಂದ ಒಂದೊಂದು ದಿನ ಬೆಂಗಳೂರಿನ ಒಂದೊಂದು ಹೊಟೇಲ್‌ನಿಂದ ರುಚಿಕರವಾದ ಉಪಾಹಾರ ತರಿಸಲಾಗುತ್ತದೆ. ಎಲ್ಲರೂ ಬೇಗನೆ ತಿಂಡಿಗೆ ಬನ್ನಿ ಎಂದು ಹೇಳಿ ಕಲಾಪವನ್ನು ಮುಂದೂಡಿದರು.

ಉಪನಾಯಕ, ಸಚೇತಕರಿಗೆ ಅಭಿನಂದನೆ
ಬೆಂಗಳೂರು: ವಿಧಾನಸಭೆ ವಿಪಕ್ಷ ಉಪನಾಯಕರಾಗಿ ಅರವಿಂದ ಬೆಲ್ಲದ್‌ ಹಾಗೂ ಮುಖ್ಯಸಚೇತಕರಾಗಿ ದೊಡ್ಡನಗೌಡ ಜಿ. ಪಾಟೀಲ್‌ ಅವರ ನೇಮಕವನ್ನು ಸ್ಪೀಕರ್‌ ಯು.ಟಿ. ಖಾದರ್‌ ಅವರು ಸದನಕ್ಕೆ ತಿಳಿಸಿದರು.

ಪ್ರಥಮ ಬಾರಿಗೆ ಸಂವಿಧಾನದ ಪೀಠಿಕೆ ಬೋಧನೆ
ಬೆಂಗಳೂರು: ವಿಧಾನಮಂಡಲದ ಉಭಯ ಸದನಗಳಲ್ಲಿ ಇದೇ ಮೊದಲ ಬಾರಿಗೆ ಸಂವಿಧಾನದ ಪೀಠಿಕೆಯನ್ನು ಶಾಸಕರಿಗೆ ಬೋಧಿಸಲಾಯಿತು. ಸೋಮವಾರ ರಾಜ್ಯಪಾಲರ ಭಾಷಣದ ಬಳಿಕ ಪ್ರತ್ಯೇಕವಾಗಿ ಸಮಾವೇಶಗೊಂಡ ವಿಧಾನಸಭೆ ಮತ್ತು ಪರಿಷತ್ತಿನ ಕಲಾಪದ ಆರಂಭದಲ್ಲಿಯೇ ವಂದೇ ಮಾತರಂ ಗೀತೆಗೆ ಗೌರವ ಸಲ್ಲಿಸಲಾಯಿತು. ಬಳಿಕ ಎಲ್ಲ ಶಾಸಕರು, ಸಿಬಂದಿಗೂ ಸಂವಿಧಾನದ ಪ್ರಸ್ತಾವನೆಯ ಪ್ರತಿಯನ್ನು ನೀಡಿ, ವಿಧಾನಸಭೆಯಲ್ಲಿ ಸ್ಪೀಕರ್‌ ಖಾದರ್‌ ಹಾಗೂ ಪರಿಷತ್‌ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಬೋಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next