Advertisement
ಪತ್ರ ಬರೆದು 8 ದಿನ ಕಳೆದರೂ ಮುಖ್ಯಮಂತ್ರಿಗಳ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಮಧ್ಯೆ ಸಿದ್ದರಾಮಯ್ಯ ಬುಧವಾರ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಹೊಸ ವರ್ಷದ ಶುಭ ಕೋರಿದ್ದಾರೆ. ಈ ವೇಳೆ ರವಿ ಪ್ರಕರಣದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.
ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ 2024ರ ಡಿ. 31ರಂದೇ ಪತ್ರ ಬರೆದಿದ್ದ ರಾಜ್ಯಪಾಲರು, ಪ್ರಕರಣವನ್ನು ವೈಯಕ್ತಿಕವಾಗಿ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದರು. ಇತ್ತೀಚೆಗೆ ಬೆಳಗಾವಿ ಅಧಿವೇಶನದ ಕೊನೆಯಲ್ಲಿ ನಡೆದ ಘಟನೆ ಬಗ್ಗೆ ಮೇಲ್ಮನೆ ಸದಸ್ಯ ಸಿ.ಟಿ. ರವಿ ಅವರ ನಿಯೋಗ ನನ್ನನ್ನು ಭೇಟಿ ಮಾಡಿದ್ದು, ಮನವಿ ಪತ್ರ ಹಾಗೂ ಹಲವು ದಾಖಲೆಗಳನ್ನು ನೀಡಿದ್ದಾರೆ ಎಂದಿದ್ದಾರೆ. ಬೆಳಗಾವಿ ನಗರ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅವರ ಸಹೋದ್ಯೋಗಿಗಳು ಸಿ.ಟಿ. ರವಿ ಅವರನ್ನು ಅಪಹರಣ ಮಾಡಿ, ಕಬ್ಬಿನ ಗದ್ದೆ, ಮೈದಾನ, ಖಾನಾಪುರ, ಕಿತ್ತೂರು, ಲೋಕಪುರ, ಸಂಕೇಶ್ವರ ಸೇರಿದಂತೆ ರಾತ್ರಿಯಿಡಿ 400 ಕಿ.ಮೀ. ಅಪಾಯಕಾರಿ ಸ್ಥಳಗಳಲ್ಲಿ ಸುತ್ತಾಡಿಸಿದ್ದಾರೆ. ಪೊಲೀಸರ ವಶದಲ್ಲಿ ಇರುವಾಗಲೇ ರಕ್ತ ಬರುವಂತೆ ಗಾಯವಾಗಿದೆ. ಭಯಂಕರ ಹಿಂಸೆ ಕೊಟ್ಟಿದ್ದಾರೆ. ದೈಹಿಕ ಮತ್ತು ಮಾನಸಿಕವಾಗಿ ಹಿಂಸಿಸಿ ಪೊಲೀಸ್ ದೌರ್ಜನ್ಯ ಎಸಗಿದ್ದಾಗಿ ರವಿ ಆರೋಪಿಸಿದ್ದಾರೆ.
Related Articles
Advertisement
ರವಿ ಮತ್ತಿತರರು ನೀಡಿರುವ ದೂರು ಹಾಗೂ ಅದಕ್ಕೆ ಪೂರಕವಾಗಿ ಕೊಟ್ಟಿರುವ ದಾಖಲೆಗಳನ್ನು ಪರಿಶೀಲಿಸಿದಾಗ ಪ್ರಕರಣವು ಬಹಳ ಗಂಭೀರವಾಗಿದೆ. ಹೀಗಾಗಿ ನಿಮ್ಮ ಮಧ್ಯಸ್ಥಿಕೆಯ ಆವಶ್ಯಕತೆ ಕಾಣುತ್ತಿದೆ ಎಂದಿದ್ದಾರಲ್ಲದೆ, ಇದು ಚುನಾಯಿತ ಪ್ರತಿನಿಧಿಯೊಬ್ಬರಿಗೆ ಸಂಬಂಧಿಸಿದ ವಿಷಯವಾಗಿದ್ದು, ವೈಯಕ್ತಿಕವಾಗಿ ಇದರತ್ತ ಗಮನ ಹರಿಸಿ, ಸೂಕ್ತ ಕ್ರಮ ಕೈಗೊಳ್ಳಿ ಎಂದೂ ರಾಜ್ಯಪಾಲರು ಸಲಹೆಯಿತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ರಾಜಭವನದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಹೊಸ ವರ್ಷದ ಶುಭ ಕೋರಿದರು.
ಜ. 1ರಂದು ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಶುಭಾಶಯ ಸ್ವೀಕರಿಸಿದ್ದ ಸಿಎಂ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆಡಳಿತಯಂತ್ರ ಚುರುಕುಗೊಳಿಸಿದ್ದರು. ಹೀಗಾಗಿ ರಾಜ್ಯಪಾಲರ ಭೇಟಿ ಸಾಧ್ಯವಾಗಿರಲಿಲ್ಲ. ಮರುದಿನ ರಾಜ್ಯಪಾಲರು ತಮ್ಮ ಮೊಮ್ಮಗನ ವಿವಾಹ ಮಹೋತ್ಸವದ ಹಿನ್ನೆಲೆಯಲ್ಲಿ ತವರಿಗೆ ತೆರಳಿದ್ದರು. ಮಂಗಳವಾರ ರಾತ್ರಿಯಷ್ಟೇ ಮರಳಿದ್ದರಿಂದ ಬುಧವಾರ ಮಧ್ಯಾಹ್ನವೇ ರಾಜ್ಯಪಾಲರನ್ನು ಸಿಎಂ ಭೇಟಿ ಮಾಡಿದರು. ಸಿ.ಟಿ. ರವಿ ಪ್ರಕರಣದ ಚರ್ಚೆ ಇಲ್ಲ
ಇತ್ತೀಚೆಗಷ್ಟೇ ಸಿ.ಟಿ. ರವಿ ವಿರುದ್ಧ ಪೊಲೀಸರು ನಡೆಸಿದ ದೌರ್ಜನ್ಯದ ಕುರಿತು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದ ರಾಜ್ಯಪಾಲರು, ಸೂಕ್ತ ಕ್ರಮ ವಹಿಸುವಂತೆ ಸಲಹೆ ನೀಡಿದ್ದರು. ರಾಜ್ಯಪಾಲರು ಪತ್ರ ಬರೆದು ಎಂಟು ದಿನವಾದರೂ ಅದಕ್ಕೆ ಸಿಎಂ ಅವರಿಂದ ಯಾವುದೇ ಉತ್ತರ ರವಾನೆಯಾಗಿರಲಿಲ್ಲ. ಹೊಸ ವರ್ಷದ ಶುಭ ಕೋರುವ ನೆಪದಲ್ಲಿ ಗವರ್ನರ್ ಭೇಟಿ ವೇಳೆ ಈ ವಿಚಾರ ಚರ್ಚಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಈ ಬಗ್ಗೆ ಯಾವ ಚರ್ಚೆಯೂ ನಡೆದಿಲ್ಲ ಎಂದು ಮೂಲಗಳು ಹೇಳಿವೆ. ರಾಜ್ಯಪಾಲರ ಪತ್ರದಲ್ಲಿ ಏನಿದೆ?
– ಪೊಲೀಸರಿಂದ ದೈಹಿಕ ಮತ್ತು ಮಾನಸಿಕ ಹಿಂಸೆ ಎಂದು ರವಿ ಆರೋಪ – ಈ ಬಗ್ಗೆ ದೂರೂ ನೀಡಿದರೂ ಪ್ರಕರಣ ದಾಖಲಿಸದ ಪೊಲೀಸರು – ಹಾಗಾಗಿ ಭದ್ರತೆ ನೀಡುವಂತೆ ರವಿ ಅವರಿಂದ ಕೋರಿಕೆ – ಆರೋಪಗಳು ಗಂಭೀರವಾಗಿವೆ. ಇದು ಚುನಾಯಿತ ಪ್ರತಿನಿಧಿಗೆ ವಿಷಯವಾಗಿದ್ದು ವೈಯಕ್ತಿಕವಾಗಿ ಗಮನ ಹರಿಸಿ