Advertisement

BJP ದೂರು ಬೆನ್ನಲ್ಲೇ ಗೆಹ್ಲೋಟ್‌ ಅಖಾಡಕ್ಕೆ; ಸಿ.ಟಿ.ರವಿಗೆ ರಾಜ್ಯಪಾಲ ಬುಲಾವ್‌?

12:41 AM Dec 28, 2024 | Team Udayavani |

ಬೆಂಗಳೂರು: ಅಶ್ಲೀಲ ಪದ ಪ್ರಯೋಗ ಪ್ರಕರಣ ಸಂಬಂಧ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಡಿ. 19ರಂದು ಪರಿಷತ್‌ ಸದಸ್ಯ ಸಿ.ಟಿ. ರವಿ ಬಂಧನ ಪ್ರಕರಣದ ಬಗ್ಗೆ ಬಿಜೆಪಿ ನಿಯೋಗ ನೀಡಿದ ದೂರಿನ ಬೆನ್ನಲ್ಲೇ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಕೂಡ ಅಖಾಡಕ್ಕೆ ಇಳಿದಿದ್ದು, ಘಟನೆ ಬಗ್ಗೆ ಮಾಹಿತಿ ನೀಡಲು ಬರುವಂತೆ ಸಿ.ಟಿ. ರವಿ ಅವರಿಗೆ ಬುಲಾವ್‌ ನೀಡಿದ್ದಾರೆ.

Advertisement

ಈ ಹಿನ್ನೆಲೆಯಲ್ಲಿ ಶುಕ್ರವಾರ ಸಿ.ಟಿ. ರವಿ ಬೆಂಗಳೂರಿಗೆ ಆಗಮಿಸಿದ್ದರು. ಆದರೆ ಮಾಜಿ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌ ಅವರ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲು ರಾಜ್ಯಪಾಲರು ದಿಲ್ಲಿಗೆ ಪ್ರಯಾಣಿಸಿರುವ ಹಿನ್ನೆಲೆಯಲ್ಲಿ ಈ ಭೇಟಿ ಸಾಧ್ಯವಾಗಿಲ್ಲ. ಹೀಗಾಗಿ ಮುಂದಿನ ವಾರ ರವಿ ರಾಜಭವನಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ವಿಪಕ್ಷ ನಾಯಕ ಆರ್‌. ಅಶೋಕ್‌, ಸಂಸದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಸಿ.ಟಿ. ರವಿ ಅವರಿಗೆ ಕರೆ ಮಾಡಿದ ಗೆಹ್ಲೋಟ್‌ ಘಟನೆಯ ಬಗ್ಗೆ ವಿವರಣೆ ಕೇಳಿದ್ದರು. ಆಗ ತಾವೇ ಖುದ್ದಾಗಿ ಬರುವುದಾಗಿ ರವಿ ತಿಳಿಸಿದಾಗ ಶುಕ್ರವಾರ ಸಮಯಾವಕಾಶ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಮುನಿರತ್ನ-ಸಿ.ಟಿ. ರವಿ ಭೇಟಿ
ಬೆಂಗಳೂರಿಗೆ ಆಗಮಿಸಿದ್ದ ಸಿ.ಟಿ. ರವಿ ಅವರು ಬಿಜೆಪಿ ಶಾಸಕ, ಮಾಜಿ ಸಚಿವ ಮುನಿರತ್ನ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು. ಇತ್ತೀಚೆಗಷ್ಟೇ ಮುನಿರತ್ನ ಮೇಲೆ ಮೊಟ್ಟೆ ದಾಳಿ ನಡೆದಿತ್ತು. ಈ ಭೇಟಿ ಬಗ್ಗೆ ಹೆಚ್ಚು ವಿವರ ನೀಡದ ರವಿ, ರಾಜ್ಯದಲ್ಲಿ ಗೂಂಡಾ ರಾಜ್‌ ಸೃಷ್ಟಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೆಡೆ ಗಾಂಧಿ ಸ್ಮರಣೆ ನಡೆಯುತ್ತಿದೆ. ಆದರೆ ಅದೇ ಕಾಲಕ್ಕೆ ಜನರು, ಜನಪ್ರತಿನಿಧಿಗಳಿಗೆ ಬೆದರಿಕೆ ಸೃಷ್ಟಿಸುವ ಗೂಂಡಾರಾಜ್‌ ವ್ಯವಸ್ಥೆಯೂ ನಿರ್ಮಾಣ ವಾಗುತ್ತಿದೆ ಎಂದು ಕಳವಳ ವ್ಯಕ್ತ ಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next