ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಸಿ.ಟಿ. ರವಿ ಅವರು ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ರಾಜ್ಯಪಾಲ ವಿ.ಆರ್.ವಾಲಾ ಅವರು ಅಂಗೀಕರಿಸಿದ್ದಾರೆ. ಆ ಮೂಲಕ ಖಾಲಿ ಇರುವ ಸಚಿವ ಸ್ಥಾನದ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಕನ್ನಡ ಮತ್ತು ಸಂಸ್ಕೃತಿ, ಯುವಜನ ಮತ್ತು ಕ್ರೀಡಾ ಖಾತೆ ಸಚಿವರಾಗಿದ್ದ ಸಿ.ಟಿ. ರವಿ ಅವರು ಇತ್ತೀಚೆಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗುವ ಜತೆಗೆ ದಕ್ಷಿಣ ಭಾರತ ಉಸ್ತುವಾರಿಯಾಗಿಯೂ ನಿಯೋಜನೆಗೊಂಡಿದ್ದರು.
“ಒಬ್ಬ ವ್ಯಕ್ತಿ- ಒಂದು ಹುದ್ದೆ’ ಎಂಬ ಪಕ್ಷದ ನಿಯಮದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಮುಖ್ಯ ಮಂತ್ರಿಗಳು ಅಂಗೀಕರಿಸಿರಲಿಲ್ಲ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ಮುಗಿದ ಬೆನ್ನಲ್ಲೇ ಬಿ.ಎಸ್.ಯಡಿಯೂರಪ್ಪ ಅವರ ಶಿಫಾರಸ್ಸಿನ ಮೇಲೆ ರಾಜ್ಯ ಪಾಲರು ರಾಜೀನಾಮೆ ಅಂಗೀಕರಿಸಿದ್ದಾರೆ.
ಇದನ್ನೂ ಓದಿ:ನಾಡು, ಭಾಷೆಯನ್ನು ತಾಯಿಯಂತೆ ಗೌರವಿಸಿ: ಯಡಿಯೂರಪ್ಪ
ಕೆಲವೇ ದಿನದಲ್ಲಿ ಸಂಪುಟ ವಿಸ್ತರಣೆ: ಉಪಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿಕೊಂಡಿದ್ದಾರೆ. ಈ ಹಿಂದೆ ಎರಡು ಮೂರು ಬಾರಿ ವಿಸ್ತರಣೆಗೆ ಪ್ರಯತ್ನ ಪಟ್ಟರೂ ಹಲವು ಕಾರಣಗಳು ಅಡ್ಡಿಯಾಗಿದ್ದವು. ಆದರೆ ಈ ಬಾರಿ ಸಂಪುಟಕ್ಕೆ ಮತ್ತಷ್ಟು ಮಂದಿ ಸೇರ್ಪಡೆಯಾಗುವುದು ಖಚಿತ ಎನ್ನಲಾಗುತ್ತಿದೆ