Advertisement

ಹೆಬ್ರಿ, ಬೈಂದೂರಿನಲ್ಲಿ ಶೀಘ್ರ ಸರಕಾರಿ ಗೋಶಾಲೆ

09:50 AM May 29, 2022 | Team Udayavani |

ಉಡುಪಿ:ಗೋ ಸಂರಕ್ಷಣೆಗೆ ಸರಕಾರ ವಿಶೇಷ ಕಾಳಜಿ ವಹಿಸುತ್ತಿದ್ದು, ಉಡುಪಿ ಜಿಲ್ಲೆಯ ಎರಡು ಕಡೆಗಳಲ್ಲಿ ಸರಕಾರಿ ಗೋಶಾಲೆಗಳ ನಿರ್ಮಾಣಕ್ಕೆ ಮುಂದಾಗಿದೆ.

Advertisement

ಈಗಾಗಲೇ ಜಿಲ್ಲೆಯಲ್ಲಿ 16 ಖಾಸಗಿ ಗೋಶಾಲೆ ಗಳು ಕಾರ್ಯಾಚರಣೆ ಮಾಡುತ್ತಿದ್ದು, ಸರಕಾರದ ನಿಯಮಾವಳಿ ಅನುಸಾರ ವೆಂಕಟರಮಣ ಗೋಶಾಲೆ, ನೀಲಾವರ ಗೋಶಾಲೆ ಹಾಗೂ ಅಮೃತಧಾರೆ ಗೋಶಾಲೆಗಳಿಗೆ ಅನುದಾನ ಬರುತ್ತಿದೆ. ಉಳಿದ ಗೋಶಾಲೆಗಳನ್ನು ಖಾಸಗಿಯವರೇ ನಿರ್ವಹಿಸುತ್ತಿ ದ್ದಾರೆ. ಕಾರ್ಕಳದ ವೆಂಕಟರಮಣ ಗೋಶಾಲೆಯವರು ಈ ಬಾರಿಯಿಂದ ಅನುದಾನವಿಲ್ಲದೆ ತಾವೇ ನಿರ್ವಹಿಸುವುದಾಗಿ ತಿಳಿಸಿದ್ದಾರೆ.

ಹೆಚ್ಚುವರಿ ನಿರ್ಮಾಣ ಎಲ್ಲಿ?

ಹೆಬ್ರಿ ತಾಲೂಕಿನ ಕೆರೆಬೆಟ್ಟುವಿನಲ್ಲಿ ಸುಮಾರು 13.24 ಎಕರೆ ಜಾಗದಲ್ಲಿ ಹಾಗೂ ಬೈಂದೂರು ಗೋಳಿಹೊಳೆಯಲ್ಲಿ 9.28 ಎಕರೆ ಪ್ರದೇಶದಲ್ಲಿ ನಿರ್ಮಾಣಕ್ಕೆ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದು, ಇದಕ್ಕೆ ಅನುಮೋದನೆ ಲಭಿಸಿದೆ. ಕೆರೆಬೆಟ್ಟುವಿನಲ್ಲಿ ಪ್ರಾರಂಭಿಕ ಹಂತದ ಕೆಲಸ ಕಾರ್ಯ ಗಳು ನಡೆಯುತ್ತಿವೆ. ಈಗಾಗಲೇ ಸರಕಾರ ದಿಂದ 53 ಲ.ರೂ. ಅನುದಾನ ಲಭಿಸಿದೆ.

ಗೋ ಸಾಗಾಟಕ್ಕೂ ಹಲವು ನಿಯಮ

Advertisement

ಹಸುಗಳನ್ನು ಕೃಷಿ, ಪಶುಸಂಗೋಪನೆ ಉದ್ದೇಶಕ್ಕಾಗಿ ಸಾಗಾಟ ಮಾಡುವವರಿಗೆ ಸಾರಿಗೆ ದೃಢೀಕರಣ ಪತ್ರ, ಮಾಲಕತ್ವ ದಾಖಲೆ ಹಾಗೂ ಪಶು ಪ್ರಥಮ ಚಿಕಿತ್ಸಾ ಪರಿಕರಗಳನ್ನು ಹೊಂದಿರಬೇಕು. 15 ಕಿ.ಮೀ. ವ್ಯಾಪ್ತಿಯೊಳಗೆ ಎರಡು ಹಸು ಅಥವಾ ಅವುಗಳ ಕರುಗಳ ಸಾಗಾಟಕ್ಕೆ ಯಾವುದೇ ಸಾರಿಗೆ ಅನುಮತಿ ಅಗತ್ಯವಿಲ್ಲ. ಹಸು ಸಾಗಾಟ ಮಾಡುವ ವಾಹನದ ಮೇಲೆ ಕೆಂಪು ಬಣ್ಣದ ದಪ್ಪ ಅಕ್ಷರಗಳಲ್ಲಿ ರವಾನಿಸುವವರು, ಸ್ವೀಕರಿಸುವವರ ಹೆಸರು, ವಿಳಾಸ ಹಾಗೂ ದೂರವಾಣಿ ‌ಂಖ್ಯೆ, ಸಾಗಾಟ ಮಾಡುವ ಹಸುಗಳ ಸಂಖ್ಯೆ, ತಳಿ ಹಾಗೂ ಪೂರೈಸಲಾದ ಆಹಾರ ಪ್ರಮಾಣವನ್ನು ಕಡ್ಡಾಯವಾಗಿ ಬರೆಯಬೇಕೆಂಬ ನಿಯಮಗಳಿವೆ. ಈ ಎಲ್ಲ ಅಂಶಗಳನ್ನು ಉಲ್ಲಂ ಸಿದ್ದೇ ಆದಲ್ಲಿ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಬಹುದು.

ಒಂದು ಗೋವಿಗೆ ದಿನಕ್ಕೆ 17.50 ರೂ.

ಸರಕಾರಿ ಗೋಶಾಲೆ ಗಳಲ್ಲಿರುವ ಪ್ರತೀ ಗೋವಿಗೆ ದಿನಕ್ಕೆ 17.50 ರೂ.ನಂತೆ ನೀಡಲಾಗುತ್ತಿದೆ. ಈ ದರವನ್ನು ಹೆಚ್ಚಿಸಬೇಕೆಂದು ಆಗ್ರಹಿಸಿದ್ದರೂ ಆ ಬೇಡಿಕೆ ಇನ್ನೂ ಈಡೇರಿಲ್ಲ. ಸರಕಾರದ ಅನುದಾನ ಲಭಿಸಲು ದರ್ಪಣ ಪೋರ್ಟಲ್‌ನಲ್ಲಿ ನೋಂದಣಿ ಮಾಡಬೇಕು. 3 ವರ್ಷ ಗಳಿಂದ ನಡೆಸುತ್ತಿರಬೇಕು. ಸಾವಿರಕ್ಕೂ ಅಧಿಕ ಗೋವುಗಳಿರಬೇಕು ಎಂಬೆಲ್ಲ ನಿಯಮಾವಳಿಗಳಿವೆ.

ಶೀಘ್ರ ಕಾಮಗಾರಿ

ಹೆಬ್ರಿ, ಬೈಂದೂರಿನಲ್ಲಿ ಗೋಶಾಲೆ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ. ಹೆಬ್ರಿಯಲ್ಲಿ ಈಗಾಗಲೇ ಕಾರ್ಯಾರಂಭವಾಗಿವೆ. ಬೈಂದೂರಿನಲ್ಲಿಯೂ ಶೀಘ್ರದಲ್ಲಿ ಕಾಮಗಾರಿಗಳನ್ನು ಶುರುಮಾಡಲಿದ್ದೇವೆ. ಡಾ| ಶಂಕರ್‌ ಶೆಟ್ಟಿ, ಉಪ ನಿರ್ದೇಶಕರು, ಪಶುಸಂಗೋಪನ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next