ಅಫಜಲಪುರ: ದೇಶದ ಶತಕೋಟಿ ಜನರಿಗೆ ಯಾವ ಫಲಾಪೇಕ್ಷೆ ಬಯಸದೆ ಅನ್ನ ನೀಡರುವ ರೈತರನ್ನು ಸರ್ಕಾರಗಳು ಮರೆಯುತ್ತಿವೆ. ಇದು ನಿಜಕ್ಕೂ ದುರಂತರ ಸಂಗತಿಯಾಗಿದೆ. ಈಗಲಾದರೂ ರೈತರ ಒಳಿತಿಗಾಗಿ ಸರ್ಕಾರಗಳು ನೀತಿಗಳನ್ನು ರೂಪಿಸಬೇಕು ಎಂದು ಶಾಸಕ ಎಂ.ವೈ. ಪಾಟೀಲ ಹೇಳಿದರು.
ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್‌ನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಕಬ್ಬು ಬೆಳೆಗಾರರ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಕೂಡ ರೈತ ಕುಟುಂಬದಿಂದ ಬಂದವರಾಗಿದ್ದೇವೆ. ರೈತರ ಕಷ್ಟಗಳನು ನನಗೂ ಗೊತ್ತಿವೆ. ಹೀಗಾಗಿ ಅನೇಕ ಸಲ ರೈತರ ಹಿತಕ್ಕಾಗಿ ವಿಧಾನ ಸಭೆಯಲ್ಲಿ ಚರ್ಚಿಸಿದ್ದೇನೆ. ಬರುವ ತಿಂಗಳು ಕಲಬುರಗಿಗೆ ಕೃಷಿ ಸಚಿವರು ಬರಲಿದ್ದಾರೆ. ತಾಲೂಕಿನ ರೈತ ಮುಖಂಡರೊಂದಿಗೆ ನಾನು ಕೂಡ ಸಚಿವರೊಂದಿಗೆ ಸಭೆ ನಡೆಸಿ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತೇನೆ ಎಂದರು.
ಕಬ್ಬು ಬೆಳೆಗಾರರ ಕಷ್ಟಗಳಿಗೆ ಪರಿಹಾರ ಸಿಗುವುದಾದರೆ ರೈತರೊಂದಿಗೆ ನಿಲ್ಲಲು ಸದಾ ಸಿದ್ಧನಿದ್ದೇನೆ. ತಾಲೂಕು ಹಾಗೂ ಸುತ್ತಮುತ್ತಲಿನ ತಾಲೂಕುಗಳಲ್ಲಿ ಬಹಳಷ್ಟು ಕಬ್ಬಿನ ಕಾರ್ಖಾನೆಗಳಾಗಿವೆ. ಗ್ರಾಮೀಣ ಭಾಗಗಳಲ್ಲಿ ಶುದ್ಧ ಕುಡಿಯುವ ನೀರು ಸಿಗದಂತಾಗಿದೆ. ಹೀಗಾಗಿ ಕಾರ್ಖಾನೆಯವರು ಪ್ರತಿವರ್ಷ ಹತ್ತು ಗ್ರಾಮಗಳಲ್ಲಿ ಕಾರ್ಖಾನೆ ವತಿಯಿಂದ ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಬೇಕು ಎಂದು ಸಲಹೆ ನೀಡಿದರು.
ಹೊಲ ಗದ್ದೆಗಳಲ್ಲಿ ವಾಸವಿರುವ ರೈತರ ಮನೆಗಳಿಗೆ ರಾತ್ರಿ ವೇಳೆ ವಿದ್ಯುತ್ ಸಂಪರ್ಕ ಇಲ್ಲದೇ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆ ನಿವಾರಣೆಗಾಗಿ ಈಗಾಗಲೇ ವಿಧಾನ ಸಭೆಯಲ್ಲಿ ಚರ್ಚಿಸಿದ್ದೇನೆ. ಆದಷ್ಟು ಬೇಗ ಜೆಸ್ಕಾಂ ಇಲಾಖೆ ಹೊಲಗದ್ದಗಳಲ್ಲಿನ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಿದ್ದಾರೆ ಎಂದು ಹೇಳಿದರು.
ಚಿಂತಕಿ, ಮಹಿಳಾ ಹೋರಾಟಗಾರ್ತಿ ಡಾ| ಮೀನಾಕ್ಷಿ ಬಾಳಿ ಮಾತನಾಡಿ, ದೇಶ ಸಂಪೂರ್ಣ ಕಾರ್ಪೋರೇಟ್ ಕಂಪನಿಗಳ ಹಿಡಿತದಲ್ಲಿದೆ. ಹೆಸರಿಗೆ ರೈತರ ಪರ ಇದ್ದೇವೆ ಎನ್ನುವ ರಾಜಕಾರಣಿಗಳು ನಮ್ಮನ್ನ ಜಾತಿ, ಧರ್ಮಗಳ ಹೆಸರಿನಲ್ಲಿ ಒಡೆದಿದ್ದಾರೆ. ಹೀಗಾಗಿ ಹಳ್ಳಿಗಳು ಹಾಳಾಗಿವೆ. ಹಿರಿಯರು, ಕಿರಿಯರೆನ್ನುವ ಅಂಜಿಕೆ ಇಲ್ಲ. ದುಡಿಯುವ ಜನ ಕಮ್ಮಿಯಾಗಿದ್ದಾರೆ. ಮೋಸ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಾಂತ ರೈತ ಸಂಘದ ಅಧ್ಯಕ್ಷ ಶ್ರೀಮಂತ ಬಿರಾದಾರ ಮಾತನಾಡಿ, ರೈತರ ಹೊಲಗಳಲ್ಲಿನ ಟ್ರಾನ್ಸಫಾರ್ಮರ್ ಗಳು ಸುಟ್ಟರೆ ಜೆಸ್ಕಾಂ ಇಲಾಖೆಯವರು 30ರಿಂದ 40 ಸಾವಿರ ರೂ. ವಸೂಲಿ ಮಾಡುತ್ತಾರೆ. ಇದು ನಿಲ್ಲಬೇಕು ಎಂದರು.
ಜಲಸಮಿತಿ ಅಧ್ಯಕ್ಷ ಸಿದ್ದಾರಾಮ ದಣ್ಣೂರ, ಗುರುಲಿಂಗಯ್ಯ ಸ್ವಾಮಿ, ಎಸ್.ವೈ. ಪಾಟೀಲ, ಅರ್ಜುನ ಕುಂಬಾರ, ಮಾಣಿಕ ಬಂಡಗಾರ, ಅಣ್ಣಾರಾಯ ಇಳಿಗೇರ್, ಅಣ್ಣಾರಾವ ಪಾಟೀಲ, ರಾಜುಗೌಡ ಪಾಟೀಲ, ಶಂಕರ ಸೋಬಾನಿ, ಅಪ್ಪಾರಾಯ ಪಾಟೀಲ, ಭೀಮರಾಯಗೌಡ ಪಾಟೀಲ, ಸುಭಾಷ ರೂಗಿ ಹಾಗೂ ಮತ್ತಿತರರು ಇದ್ದರು.