Advertisement
ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಏಕೈಕ ಕಾರಣಕ್ಕೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರ ಜನ್ಮ ತಳೆಯಿತು. ಸರಕಾರದಲ್ಲಿ ಪ್ರತಿನಿತ್ಯ ಶಾಸಕರ ರಾಜೀನಾಮೆ ಗೊಂದಲ, ಮುಖ್ಯಮಂತ್ರಿಗಳು ಕುರ್ಚಿ ಉಳಿಸಿಕೊಳ್ಳುವ ಪ್ರಹಸನ ಹಾಗೂ ಅನುದಾನ ಬಿಡುಗಡೆಯಾಗದ ಕಾರಣದಿಂದ ಇಸ್ರೇಲ್ ಕೃಷಿ ಯೋಜನೆಯಂತ ಮಹತ್ವದ ಯೋಜನೆಗಳು ಇನ್ನು ಅನಷ್ಠಾನಕ್ಕೆ ಬಂದಿಲ್ಲ. ಹಳೆ ಯೋಜನೆಗಳ ಮತ್ತು ಮುಂದುವರಿದ ಕಾಮಗಾರಿಗಳಲ್ಲೇ ಜಿಲ್ಲೆಯ ಅಧಿಕಾರಿ ವರ್ಗ ತಲ್ಲೀನವಾಗಿದೆ.
Related Articles
Advertisement
ಗದುಗಿನಲ್ಲಿ ಈರಳ್ಳಿ ಬೆಳೆಗಳ ಗುಣ ವಿಶ್ಲೇಷಣೆ ಮತ್ತು ಸಂಸ್ಕರಣಾ ಘಟಕಗಳ ಸ್ಥಾಪನೆಗಾಗಿ ಪ್ರಕಟಿಸಿರುವ ‘ರೈತ ಕಣಜ’ ಯೋಜನೆ ಬಗ್ಗೆ ಅಧಿಕೃತ ಮಾಹಿತಿಯೇ ಇಲ್ಲ ಎನ್ನುತ್ತಾರೆ ಜಿಲ್ಲಾಮಟ್ಟದ ಅಧಿಕಾರಿಗಳು.
ಜಿಮ್ಸ್ ಆಸ್ಪತ್ರೆಗೆ ಬರಪೂರ: ಇಲ್ಲಿನ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಜಿಮ್ಸ್ ಆಸ್ಪತ್ರೆಯಲ್ಲಿ 450 ಹಾಸಿಗೆಗಳ ಕಟ್ಟಡ ನಿರ್ಮಾಣಕ್ಕೆ ಸಿದ್ದರಾಮಯ್ಯ ಸರಕಾರದಲ್ಲೇ ಹಸಿರು ನಿಶಾನೆ ತೋರಿಸಲಾಗಿತ್ತು. ಅದನ್ನು ಎಚ್.ಡಿ. ಕುಮಾರಸ್ವಾಮಿ ತಮ್ಮ ಬಜೆಟ್‌ನಲ್ಲೂ ಪುನರುಚ್ಛರಿಸುವ ಮೂಲಕ ಜಿಮ್ಸ್ ಅಭಿವೃದ್ಧಿ ವೇಗ ಹೆಚ್ಚಿಸಿದರು. ಒಟ್ಟು 110 ಕೋಟಿ ರೂ. ಅಂದಾಜು ಮೊತ್ತದಲ್ಲಿ ಈವರೆಗೆ 46.28 ಕೋಟಿ ರೂ. ಬಿಡುಗಡೆಯಾಗಿದೆ. ಜಿಮ್ಸ್ ಆಸ್ಪತ್ರೆ ಜೊತೆಜೊತೆಗೆ ಆಯುಷ್ ಇಲಾಖೆಯಿಂದ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಆಯುಷ್ ಆಸ್ಪತ್ರೆ ಕಟ್ಟಡ ಕಾಮಗಾರಿ ಬರದಿಂದ ಸಾಗಿದೆ.
ವಿದ್ಯಾರ್ಥಿ ನಿಲಯದ 2ನೇ ಹಂತದ ಕಾಮಗಾರಿಗೆ ಒಟ್ಟು 22.50 ಕೋಟಿ ರೂ. ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದು ಜು. 1ರಂದು ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯಕ್ ಚಾಲನೆ ನೀಡಿದ್ದಾರೆ. ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ.
ಈ ವರ್ಷದ ಅನುದಾನವೇ ಬಂದಿಲ್ಲ: ಪ್ರಸಕ್ತ ಸಾಲಿನ ಹಣಕಾಸು ವರ್ಷ ಆರಂಭಗೊಂಡು ಮೂರು ತಿಂಗಳು ಕಳೆದರೂ ಜಿಲ್ಲೆಯ ವಿವಿಧ ಇಲಾಖೆಗಳಿಗೆ ನಾನಾ ಲೆಕ್ಕ ಶೀರ್ಷಿಕೆಯಡಿ ಅನುದಾನವೇ ಬಂದಿಲ್ಲ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರಾಥಮಿಕ, ಪ್ರೌಢಶಾಲಾ ನಿರ್ಮಾಣ ಹಾಗೂ ದುರಸ್ತಿಯಡಿ 2018-19ನೇ ಸಾಲಿಗೆ 267.80 ಲಕ್ಷ ರೂ. ಮೊತ್ತದಲ್ಲಿ ಒಟ್ಟು 89 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅದರಲ್ಲಿ ಬಹುತೇಕ ಪೂರ್ಣಗೊಂಡಿವೆ. ಆದರೆ, 2019-20ನೇ ಸಾಲಿಗೆ ಇನ್ನಷ್ಟೇ ಕ್ರಿಯಾಯೋಜನೆ ಸಿದ್ಧಗೊಳ್ಳಬೇಕಿದೆ.
ಲೋಕೋಪಯೋಗಿ ಇಲಾಖೆಯಿಂದ ಇನ್ನೂ 2018-19ನೇ ಸಾಲಿನ ಕೆಲಸಗಳೇ ಪ್ರಗತಿಯಲ್ಲಿವೆ. ವಿವಿಧ 12 ಕಾಮಗಾರಿಗ ಳಿಗೆ ಒಟ್ಟು 117.9032 ಕೋಟಿ ರೂ. ಗಳಲ್ಲಿ 91.4506 ಕೋಟಿ ರೂ. ಖರ್ಚಾಗಿದ್ದು, 26.4526 ಕೋಟಿ ರೂ. ಬಾಕಿ ಉಳಿದಿದೆ. ಇನ್ನು, ಪ್ರಸಕ್ತ ಸಾಲಿನ ಕಾಮಗಾರಿಗಳ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ.
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ಕಳೆದ ಸಾಲಿನಲ್ಲಿ ವಿವಿಧ ಲೆಕ್ಕ ಶೀರ್ಷಿಕೆಯಡಿ 61 ಕೋಟಿ ರೂ. ಲಭ್ಯವಾಗಿದ್ದು, ಅದರಲ್ಲಿ 52 ಕೋಟಿ ರೂ. ಖರ್ಚಾಗಿದೆ. ನಬಾರ್ಡ್ ಮೂಲಕ 4 ಕೋಟಿ ರೂ. ಮೊತ್ತದಲ್ಲಿ ವಿವಿಧ 4 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಸಂಪೂರ್ಣ ಮೊತ್ತ ಬಾಕಿಯಿದೆ. ಪ್ರಸಕ್ತ ಸಾಲಿಗೆ ಜಿಲ್ಲೆಯ 213 ಕೆರೆಗಳ ವಾರ್ಷಿಕ ನಿರ್ವಹಣೆ ಮತ್ತು ದುರಸ್ತಿಗಾಗಿ 56 ಲಕ್ಷ ರೂ. ವೆಚ್ಚದಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಿಯಮಿತವಾಗಿ ಅನುದಾನ ಲಭ್ಯವಾಗುತ್ತಿದೆ. ಇನ್ನುಳಿದಂತೆ ಗದಗ-ಬೆಟಗೇರಿ ನಗರಸಭೆ ಸೇರಿದಂತೆ ಜಿಲ್ಲೆಯ 9 ಸ್ಥಳೀಯ ಸಂಸ್ಥೆಗಳಿಗೂ ಯಾವುದೇ ವಿಶೇಷ ಅನುದಾನ ಪ್ರಕಟವಾಗಿಲ್ಲ. ಸಮಾಜ ಕಲ್ಯಾಣ, ಸಣ್ಣ ನೀರಾವರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ ಇಲಾಖೆಗಳೂ ಸರಕಾರದ ನಿಯಮಿತ ಕಾರ್ಯಕ್ರಮಗಳಿಗೆ ಸೀಮಿತವಾಗಿವೆ.
ಒಟ್ಟಾರೆ, ರಾಜ್ಯ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಅಭಿವೃದ್ಧಿ ಕಾರ್ಯಗಳು ಚುರುಕು ಪಡೆದಿಲ್ಲ. ಬಜೆಟ್‌ನಲ್ಲಿ ಪ್ರಕಟಿಸಿರುವ ಇಸ್ರೇಲ್ ಮಾದರಿ ಕೃಷಿ ಎಂಬ ಬಹುದೊಡ್ಡ ಕನಸು ಬಿತ್ತಿದ್ದರೂ ಹಣಕಾಸಿನ ನೆರವಿಲ್ಲದೇ ದಾಖಲೆಗೆ ಸೀಮಿತಗೊಂಡಿದೆ.
ಮೂರು ತಿಂಗಳು ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಏನ್ನನ್ನು ಮಾಡಲಾಗಲಿಲ್ಲ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮುಂದಿನ ವಾರ ಸಂಬಂಧಿಸಿ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ, ಇಸ್ರೇಲ್ ಕೃಷಿ ಸೇರಿದಂತೆ ಬಜೆಟ್ ಘೋಷಣೆ ಕ್ರಮಗಳನ್ನು ಅನುಷ್ಠಾನಕ್ಕೆ ಸೂಚಿಸುತ್ತೇವೆ. ಅದರೊಂದಿಗೆ ಜಿಲ್ಲೆಗೆ ಅಗತ್ಯವಿರುವ ಮತ್ತಿತರರೆ ಯೋಜನೆ ಹಾಗೂ ಕಾರ್ಯಕ್ರಮಗಳ ಬಗ್ಗೆಯೂ ಗಮನ ಹರಿಸಲಾಗುತ್ತದೆ.
•ವೀರೇಂದ್ರ ನಾಗಲದಿನ್ನಿ