Advertisement
ಹೌದು, ಜಿಲ್ಲೆಯಲ್ಲಿ ಸರ್ಕಾರದ ಮುಜರಾಯಿ ಇಲಾಖೆಯ ಅಧೀನದಲ್ಲಿ ಬರುವ ಬಿ ದರ್ಜೆಯ ಮೂರು ಹಾಗೂ ಸಿ ದರ್ಜೆಯ 1160 ಸೇರಿ ಒಟ್ಟು 1163 ದೇವಾಲಯಗಳಿವೆ. ಬಿ ದರ್ಜೆಯಲ್ಲಿ ಪ್ರಮುಖವಾಗಿ ಬಾದಾಮಿಯ ಬನಶಂಕರಿ ದೇವಾಲಯ (ಸದ್ಯ ವಿವಾದ ಕೋರ್ಟ್‌ನಲ್ಲಿದ್ದು, ಅದನ್ನೂ ಖಾಸಗಿ ಟ್ರಸ್ಟ್‌ನಿಂದ ನಿರ್ವಹಿಸಲಾಗುತ್ತಿದೆ), ಮುಚಖಂಡಿ ವೀರಭದ್ರೇಶ್ವರ ದೇವಾಲಯ ಹಾಗೂ ತಾಲೂಕಿನ ತುಳಸಿಗೇರಿಯ ಆಂಜನೆಯ ದೇವಾಲಯ ಸೇರಿ ಮೂರು ಬಿ ದರ್ಜೆಯಲ್ಲಿವೆ. ಇನ್ನು ಜಿಲ್ಲೆಯ 9 ತಾಲೂಕು, 602 ಗ್ರಾಮಗಳ ವ್ಯಾಪ್ತಿಯೂ ಸೇರಿದಂತೆ ಒಟ್ಟು 1160 ದೇವಾಲಯಗಳು, ಮುಜರಾಯಿ ಇಲಾಖೆಯ ಸಿ ದರ್ಜೆ ಮಾನ್ಯತೆಯಡಿ ಇವೆ.
ರಾಜ್ಯದ ಮುಜರಾಯಿ ಇಲಾಖೆಯಡಿ ಬರುವ ಎ ದರ್ಜೆಯ ದೇವಾಲಯಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ದೈವ ಸಂಕಲ್ಪ ಹೆಸರಿನ ಹೊಸ ಯೋಜನೆ ರೂಪಿಸಿದೆ. ಈ ಯೋಜನೆಯಡಿ ರಾಜ್ಯದ 25 ದೇವಸ್ಥಾನ ಆಯ್ಕೆ ಮಾಡಿದ್ದು, ಪ್ರತಿಯೊಂದು ದೇವಸ್ಥಾನದ ಅಭಿವೃದ್ಧಿಗೆ ಒಟ್ಟಾರೆ 1143.61 ಲಕ್ಷ ಅನುದಾನವೂ ಬಿಡುಗಡೆ ಮಾಡಿದೆ. ವಿಪರ್ಯಾಸ ಅಂದರೆ ರಾಜ್ಯ ಸರ್ಕಾರ, ದೈವ ಸಂಕಲ್ಪ ಯೋಜನೆಯಡಿ ಆಯ್ಕೆ ಮಾಡಿದ 25 ದೇವಸ್ಥಾನಗಳಲ್ಲಿ ಉತ್ತರಕರ್ನಾಟಕದ ಎರಡು ದೇವಸ್ಥಾನ ಮಾತ್ರ ಇವೆ. ಅದರಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲ್ಲಮ್ಮ ದೇವಾಲಯ, ಕೊಪ್ಪಳದ ಹುಲಿಗೆಮ್ಮ ದೇವಾಲಯ ಮಾತ್ರ ಇವೆ. ಉಳಿದಂತೆ ದಕ್ಷಿಣ ಕರ್ನಾಟಕದ ದೇವಾಲಯಗಳೇ ಈ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
Related Articles
Advertisement
ಆದರೆ, ಸರ್ಕಾರದ ಮುಜರಾಯಿ ಇಲಾಖೆಯಡಿ ಎ ದರ್ಜೆಯ ದೇವಸ್ಥಾನಗಳೇ ಜಿಲ್ಲೆಯಲ್ಲಿಲ್ಲ. ಜಿಲ್ಲೆಯ ಪ್ರಮುಖ ದೇವಾಲಯಗಳನ್ನು ಅಭಿವೃದ್ಧಿಪಡಿಸಿ, ಮೇಲ್ದರ್ಜೆಗೇರಿಸಬೇಕು. ಸದ್ಯ ಬಿ ದರ್ಜೆಯಲ್ಲಿ ಇರುವ ಮೂರು ದೇವಾಲಯಗಳನ್ನು ಎ ದರ್ಜೆಗೆ ಹಾಗೂ ಸಿ ದರ್ಜೆಯಲ್ಲಿ ಇರುವ 1160 ದೇವಾಲಯಗಳಿವೆ. ಸಿ ದರ್ಜೆ ಸಾವಿರಕ್ಕೂ ಹೆಚ್ಚು ದೇವಾಲಯಗಳಲ್ಲಿ ಕನಿಷ್ಠ 10ಕ್ಕೂ ಹೆಚ್ಚು ಪ್ರಮುಖ ದೇವಾಲಯ ಗುರುತಿಸಿ, ಅವುಗಳನ್ನು ಬಿ ದರ್ಜೆಗಾದರೂ ಮೇಲ್ದರ್ಜೆಗೇರಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.
ನಮ್ಮ ಜಿಲ್ಲೆಯ ಮುಚಖಂಡಿವೀರಭದ್ರೇಶ್ವರ, ಬಾದಾಮಿಯ ಬನಶಂಕರಿ ದೇವಾಲಯ (ವ್ಯಾಜ್ಯ ಕೋರ್ಟ್ ನಲ್ಲಿದೆ) ಹಾಗೂ ತುಳಸಿಗೇರಿಯ ಆಂಜನೆಯ ದೇವಾಲಯ ಮುಜರಾಯಿ ಇಲಾಖೆಯ ಬಿ ದರ್ಜೆ ವ್ಯಾಪ್ತಿಯಲ್ಲಿವೆ. ಸಿ ದರ್ಜೆಯಲ್ಲಿ 1160 ದೇವಾಲಯಗಳಿವೆ. ರಾಜ್ಯ ಸರ್ಕಾರ ದೈವ ಸಂಕಲ್ಪ ಯೋಜನೆಯಡಿ ನಮ್ಮ ಜಿಲ್ಲೆಯ ದೇವಸ್ಥಾನಗಳು ಆಯ್ಕೆಯಾಗಿಲ್ಲ. ಎ ದರ್ಜೆಯ ದೇವಾಲಯ ಮಾತ್ರ ಆ ಯೋಜನೆಯಡಿ ಇವೆ.
∙ಮಹಾದೇವ ಮುರಗಿ, ಅಪರ ಜಿಲ್ಲಾಧಿಕಾರಿ
ಶ್ರೀಶೈಲ ಕೆ.ಬಿರಾದಾರ