Advertisement
ಈ ಯೋಜನೆಗೆ ರಾಜ್ಯ ಸರಕಾರ ಈ ವರ್ಷದ ಬಜೆಟ್‌ನಲ್ಲಿ 5391 ಕೋಟಿ ರೂ. ಹಣ ಮೀಸಲಿಟ್ಟಿದೆ. ಈಗಾಗಲೇ ಮಲೆನಾಡು ಜಲಾಶಯಗಳ ಬೀಡಾಗಿದ್ದು ಇದರ ನಡುವೆ ಪ್ರಕೃತಿ ನಾಶದ ಮತ್ತೂಂದು ಯೋಜನೆ ಬೇಕಿತ್ತೇ ಎಂದು ಮಲೆನಾಡಿಗರು ಪ್ರಶ್ನಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಏಳು ಜಲಾಶಯಗಳಿದ್ದು ಲಕ್ಷಾಂತರ ಹೆಕ್ಟೇರ್ ಅರಣ್ಯ ಪ್ರದೇಶ ಮುಳುಗಡೆಯಾಗಿದೆ. ಅಭಿವೃದ್ಧಿ ಯೋಜನೆಗಳು, ಒತ್ತುವರಿ ಕಾರಣಕ್ಕೆ ಅರಣ್ಯ ಭೂಮಿ ಕುಸಿಯುತ್ತಿದೆ. ಮತ್ತಷ್ಟು ಯೋಜನೆಗಳನ್ನು ಕೈಗೊಂಡರೆ ಅಪರೂಪದ ಜೀವ ವೈವಿಧ್ಯಕ್ಕೆ ಧಕ್ಕೆ ಬರಲಿದೆ ಎಂಬ ಆತಂಕ ಮನೆ ಮಾಡಿದೆ.
Related Articles
Advertisement
ಸಿಂಗಳೀಕ ಆವಾಸಸ್ಥಾನ
ಪ್ರಪಂಚದಲ್ಲೇ ಅಳಿವಿನಂಚಿನಲ್ಲಿರುವ ಪ್ರಾಣಿ ಎಂದು ಪರಿಗಣಿಸಲ್ಪಟ್ಟ ಸಿಂಗಳೀಕ ಈ ಅರಣ್ಯ ಪ್ರದೇಶದಲ್ಲಿ ಹೆಚ್ಚು ಕಂಡುಬರುತ್ತವೆ. ಇಡೀ ದೇಶದಲ್ಲಿ ಮೂರು ಸಾವಿರ ಸಿಂಗಳೀಕ ಇರಬಹುದು ಎಂದು ಅಂದಾಜಿಸಲಾಗಿದೆ. ಅವುಗಳ ಆವಾಸಸ್ಥಾನಕ್ಕೆ ಧಕ್ಕೆಯಾದರೆ ಸಂತತಿ ನಾಶವಾಗಬಹುದು. ಜತೆಗೆ ಈ ಭಾಗದಲ್ಲಿ ಹೆಚ್ಚು ಮಂಗೋಟೆ ಪಕ್ಷಿಗಳು ಕಂಡುಬರುತ್ತವೆ. ಅವು ಸಹ ಬೇರೆಡೆ ವಲಸೆ ಹೋಗುವ ಸಾಧ್ಯತೆ ಇದೆ.
ಯೋಜನೆಯಿಂದ ಆದಾಯಕ್ಕಿಂತ ಖರ್ಚು ಹೆಚ್ಚು
ತಲಕೆಳಲೆ ಮತ್ತು ಗೇರುಸೊಪ್ಪ ಜಲಾಶಯಗಳ ನಡುವೆ ಭೂಮಿಯ ಆಳದಲ್ಲಿ ಸುರಂಗ ಕೊರೆದು ವಿದ್ಯುದಾಗಾರ ನಿರ್ಮಿಸಲಾಗುತ್ತದೆ. ಇದಕ್ಕೆ ತಲಕೆಳಲೆ ಜಲಾಶಯದಿಂದ ಸುರಂಗಕ್ಕೆ ನೀರು ಹರಿಸಿ ವಿದ್ಯುತ್ ಉತ್ಪಾದಿಸಿ ಅದನ್ನು ಗೇರುಸೊಪ್ಪ ಜಲಾಶಯಕ್ಕೆ ಸೇರಿಸಲಾಗುತ್ತದೆ. ಗೇರುಸೊಪ್ಪ ಜಲಾಶಯದಿಂದ ಮೋಟಾರ್ ಗಳ ಮೂಲಕ 500 ಮೀಟರ್ ಎತ್ತರವಿರುವ ತಲಕೆಳಲೆ ಜಲಾಶಯಕ್ಕೆ ಮತ್ತೆ ನೀರು ತುಂಬಿಸಲಾಗುತ್ತದೆ. 100 ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿದರೆ 125 ಯೂನಿಟ್ ನೀರು ಪಂಪ್ ಮಾಡಲು ಖರ್ಚಾಗುತ್ತದೆ. ಇಂತಹ ದುಬಾರಿ ಯೋಜನೆ ಏಕೆ ಎಂಬುದು ತಜ್ಞರ ಅಭಿಪ್ರಾಯ.
ಭೂಗರ್ಭ ಜಲವಿದ್ಯುತ್ ಯೋಜನೆ ಪ್ರದೇಶ ದಟ್ಟ ಅರಣ್ಯಪ್ರದೇಶವಾಗಿದ್ದು ಸಿಂಗಳೀಕದಂತಹ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಆವಾಸಸ್ಥಾನವಾಗಿದೆ. ಲಕ್ಷಾಂತರ ಮರಗಳು ಇದಕ್ಕೆ ಬಲಿಯಾಗುತ್ತವೆ. ಪಶ್ಚಿಮ ಘಟ್ಟದಲ್ಲಿ ಇಂತಹ ಯೋಜನೆಗಳನ್ನು ತರುವುದು ಸರಕಾರ ನಿಲ್ಲಿಸಬೇಕು. -ಅಖೀಲೇಶ್ ಚಿಪ್ಳಿ, ಪರಿಸರ ಹೋರಾಟಗಾರ
-ಶರತ್ ಭದ್ರಾವತಿ