ಶೃಂಗೇರಿ: ಕಳಸ ಬಳಿಯ ರೈತ ಚನ್ನಪ್ಪಗೌಡ ಅವರ ಜಮೀನು ಸಂಪೂರ್ಣ ನಾಶವಾಗಿದ್ದರೂ ಪರಿಹಾರ ನೀಡುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದರು.
ಅತಿವೃಷ್ಟಿಯಿಂದ ಜಮೀನು ಕಳೆದುಕೊಂಡ ಕಳಸ ಬಳಿಯ ರೈತ ಚನ್ನಪ್ಪಗೌಡ ಅವರ ಆತ್ಮಹತ್ಯೆ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಪಟ್ಟಣದ ಕೆವಿಆರ್ ವೃತ್ತದಲ್ಲಿ ಸೋಮವಾರ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ನೆರೆಯಿಂದ ಅನಾಹುತ ಸಂಭವಿಸಿದ್ದರೂ ಕೇಂದ್ರ ಸರ್ಕಾರ ಬಿಡಿಗಾಸನ್ನೂ ನೀಡದೇ ರಾಜ್ಯಕ್ಕೆ ವಂಚಿಸಿದೆ. ಹಿಂದಿನ ಸರಕಾರ ರೈತರು ಮೃತಪಟ್ಟರೆ, ಮನೆ ಕಳೆದುಕೊಂಡರೆ ತಕ್ಷಣ ಸ್ಥಳದಲ್ಲಿಯೇ ಪರಿಹಾರ ನೀಡಿದೆ. ಈ ಬಾರಿ ನೆರೆಯಿಂದ ಕ್ಷೇತ್ರದಲ್ಲಿ 2,500 ಕೋಟಿ ರೂ. ನಷ್ಟ ಸಂಭವಿಸಿದ್ದು, ಅನೇಕ ಹಳ್ಳಿಗಳು ಸಂಪರ್ಕವನ್ನೇ ಕಡಿದುಕೊಂಡಿವೆ. ಸರಕಾರ ಉಳಿಸಿಕೊಳ್ಳಲು ಆಪರೇಷನ್ ಕಮಲದ ಮೂಲಕ ಶಾಸಕರ ಖರೀದಿಗೆ ಸಾವಿರಾರು ಕೋಟಿ ರೂ.ಖರ್ಚು ಮಾಡಿರುವ ಬಿಜೆಪಿ, ನಿರಾಶ್ರಿತರಿಗೆ ಪರಿಹಾರ ಬಿಡುಗಡೆ ಮಾಡುವಲ್ಲಿ ಮಾತ್ರ ವಿಳಂಬ ಮಾಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದರೆ ಪಕ್ಷದಿಂದ ಉಗ್ರ ಪ್ರತಿಭಟನೆ ನಡೆಸಲಾಗುದು ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ವಕ್ತಾರ ಉಮೇಶ್ ಪುದುವಾಳ್ ಮಾತನಾಡಿ, ರೈತರ ಆತ್ಮಹತ್ಯೆ ನಿರಂತರವಾಗಿ ನಡೆಯುತ್ತಿದ್ದರೂ, ಕೇಂದ್ರ ಹಾಗೂ ರಾಜ್ಯ ಸರಕಾರ ಸ್ಪಂದಿಸುತ್ತಿಲ್ಲ. ವಾಹನ ಸವಾರರರಿಗೆ ನಿಯಮ ತಿದ್ದುಪಡಿ ಮಾಡಿರುವ ಸರಕಾರ ಜನಸಾಮಾನ್ಯರಿಗೆ ತೀವ್ರ ತೊಂದರೆ ನೀಡುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ಮುಖಂಡ ಕೆ.ಎಂ.ರಮೇಶ ಭಟ್ಟ ಮಾತನಾಡಿ, ರೈತರ ಪರ ಕಾಳಜಿ ಇಲ್ಲದ ಸರಕಾರದ ವಿರುದ್ಧ ಹೋರಾಟ ನಡೆಸಬೇಕಾಗಿದೆ ಎಂದರು.
ಕೆವಿಆರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಕೆಲ ಹೊತ್ತು ರಸ್ತೆ ತಡೆ ನಡೆಸಿದರು. ಮೃತ ರೈತನ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್, ಮುಖಂಡರಾದ ಕೆ.ಎಂ.ಕೃಷ್ಣಪ್ಪಗೌಡ, ಕೆ.ಆರ್.ವೆಂಕಟೇಶ್,ಲಕ್ಷಿ ್ಮೕಶ, ಚಂದ್ರಹಾಸ, ಚಂದ್ರಶೇಖರ್, ನಾರಾಯಣ, ಕೆ.ಸಿ.ವೆಂಕಟೇಶ್, ಶಕೀಲ ಗುಂಡಪ್ಪ, ಸೌಭಾಗ್ಯ, ಲತಾ, ಚಂದ್ರಮತಿ ಮತ್ತಿತರರು ಭಾಗವಹಿಸಿದ್ದರು.