Advertisement

ಆಪತ್ಕಾಲದ ಖಜಾನೆ ನಿಧಿ ಮೇಲೆ ಸರ್ಕಾರಗಳ ಕಣ್ಣು

10:50 PM Oct 13, 2019 | Lakshmi GovindaRaju |

ಬೆಂಗಳೂರು: ರಾಜ್ಯದ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾಮಗಾರಿಗಳ ಕಾರ್ಮಿಕರ ಕಲ್ಯಾಣ ಹಾಗೂ ಸಾಮಾಜಿಕ ಭದ್ರತೆಗಾಗಿ ರೂಪಿಸಲಾಗಿರುವ “ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ’ಯಡಿ ಸಂಗ್ರಹವಾಗಿರುವ 8 ಸಾವಿರ ಕೋಟಿ ರೂ. ಹಣ ಸರ್ಕಾರಗಳ ಪಾಲಿಗೆ ಕಷ್ಟ ಕಾಲದಲ್ಲಿ ತಕ್ಷಣಕ್ಕೆ ಸಂಪನ್ಮೂಲ ಹೊಂದಿಸುವ “ಖಜಾನೆ’ ಆದಂತಿದೆ.

Advertisement

ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ಹಣವನ್ನು ತಕ್ಷಣಕ್ಕೆ ಬಳಸಿಕೊಳ್ಳುವ ರಾಜ್ಯ ಸರ್ಕಾರದ ಆಲೋಚನೆಗೆ ಸಾಕಷ್ಟು ಆಕ್ಷೇಪ ವ್ಯಕ್ತವಾಗಿತ್ತು. ಇದೀಗ ನಿಧಿಯ 3 ಸಾವಿರ ಕೋಟಿ ರೂ. ಹಣವನ್ನು ಸಾಲ ರೂಪದಲ್ಲಿ ಪಡೆದುಕೊಂಡು ನೆರೆ ಸಂತ್ರಸ್ತರ ಪುನರ್ವಸತಿ ಹಾಗೂ ಪರಿಹಾರಕ್ಕಾಗಿ ಬಳಸಿಕೊಳ್ಳುವ ಪ್ರಸ್ತಾವನೆಯೊಂದು ಸರ್ಕಾರದ ಮಟ್ಟದಲ್ಲಿ ಸಿದ್ಧಗೊಂಡಿದೆ ಎಂದು ಹೇಳಲಾಗುತ್ತಿದೆ.

ಆದರೆ, ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಅಲ್ಲದೇ ಕಾಯ್ದೆ ಯಲ್ಲೂ ಅದಕ್ಕೆ ಅವಕಾಶವಿಲ್ಲ. ಇದಕ್ಕೆಲ್ಲ ಅವಕಾಶ ನೀಡುವುದಿಲ್ಲ ಎಂದು ಕಾರ್ಮಿಕ ಸಂಘಟನೆಗಳು ಹೇಳುತ್ತಿದ್ದರೆ, ಈ ಮಧ್ಯೆ ಅಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕಾರ್ಮಿಕ ಇಲಾಖೆ ಹೇಳುತ್ತಿದೆ.

ಅಷ್ಟಕ್ಕೂ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ಮೇಲೆ ಸರ್ಕಾರದ ಕಣ್ಣು ಬಿದ್ದಿರುವುದು ಇದೇ ಮೊದ ಲಲ್ಲ. ಈ ಹಿಂದೆ ಕಾಂಗ್ರೆಸ್‌ ಹಾಗೂ ಮೈತ್ರಿ ಸರ್ಕಾರದ ಅವಧಿ ಯಲ್ಲೂ ಇಂತಹ ಪ್ರಯತ್ನಗಳು ನಡೆದಿದ್ದವು. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌ ಇನ್ನಿತರ ಕಲ್ಯಾಣ ಕಾರ್ಯಕ್ರಮ ಗಳಿಗೆ ತಕ್ಷಣಕ್ಕೆ ಸಂಪನ್ಮೂಲ ಹೊಂದಿಸಿಕೊಳ್ಳಲು ಇದೇ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ಮೇಲೆ ಕಣ್ಣು ಬಿದ್ದಿತ್ತು.

ಅದೇ ರೀತಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ರೈತರ ಸಾಲ ಮನ್ನಾ ಯೋಜನೆಗೂ ಇದೇ ನಿಧಿಯ ಹಣ ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆದಿತ್ತು. ಉತ್ತರ ಕರ್ನಾಟಕ ಸೇರಿ ಮಲೆನಾಡು, ಕರಾವಳಿ ಭಾಗದಲ್ಲಿ ಉಂಟಾದ ಪ್ರವಾಹದಿಂದಾಗಿ 36 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಿ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

Advertisement

ಅದರಲ್ಲಿ ಕೇಂದ್ರ ಸರ್ಕಾರ ಮಧ್ಯಂತರ ಪರಿಹಾರವಾಗಿ 1,200 ಕೋಟಿ ರೂ. ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರದಿಂದ ಈವರೆಗೆ 3,100 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ತುರ್ತು ಹಣದ ಅವಶ್ಯಕತೆ ಇರುವುದರಿಂದ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಿಂದ 3 ಸಾವಿರ ಕೋಟಿ ಹಾಗೂ ಗಣಿ ಬಾಧಿತ ಪ್ರದೇಶಗಳ ಪುನರ್ವಸತಿ ನಿಧಿಯ 2 ಸಾವಿರ ಕೋಟಿ ರೂ. ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳುವ ಪ್ರಸ್ತಾವನೆಯಿದೆ ಎಂದು ಹೇಳಲಾಗುತ್ತಿದೆ.

2007ರಲ್ಲಿ ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿ ಅಸ್ತಿತ್ವಕ್ಕೆ ಬಂದಿತ್ತು. ಇದಕ್ಕಾಗಿ “ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಹಾಗೂ ಸಾಮಾಜಿಕ ಭದ್ರತಾ ಮಂಡಳಿ’ ರಚಿಸಲಾಗಿದೆ. ಅಂದಿನಿಂದ 2019ರ ಸೆಪ್ಟೆಂಬರ್‌ವರೆಗೆ ಬರೊಬ್ಬರಿ 8,358 ಕೋಟಿ ರೂ. ನಿಧಿ ಸಂಗ್ರಹವಾಗಿದೆ. ಇಲ್ಲಿವರೆಗೆ 21 ಲಕ್ಷ ಕಟ್ಟಡ ಕಾರ್ಮಿ ಕರು ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ.

ಆದರೆ, ಕಳೆದ 12 ವರ್ಷಗಳಲ್ಲಿ ಈ ನಿಧಿಯಲ್ಲಿ ಕಾರ್ಮಿಕರ ಕಲ್ಯಾಣ ಹಾಗೂ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳಿಗೆ ಖರ್ಚಾಗಿದ್ದು 532 ಕೋಟಿ ರೂ. ಮಾತ್ರ. ದೊಡ್ಡ ಮೊತ್ತದ ಹಣ ಖರ್ಚಾಗದೆ ಬಾಕಿ ಉಳಿದಿರುವುದೇ ಸರ್ಕಾರಗಳ ಕಣ್ಣು ಇದರ ಮೇಲೆ ಬೀಳುವುದಕ್ಕೆ ಮುಖ್ಯ ಕಾರಣ ಎಂದು ಎನ್ನಲಾಗುತ್ತಿದೆ.

ಕಾರ್ಮಿಕರ ಕಲ್ಯಾಣ ನಿಧಿಯ ಹಣವನ್ನು ನೆರೆ ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ವರ್ಗಾಯಿಸುವ ಅಥವಾ ಸಾಲದ ರೂಪದಲ್ಲಿ ನಿಧಿಯ ಹಣ ಪಡೆದುಕೊಳ್ಳುವ ಯಾವ ಪ್ರಸ್ತಾವನೆಯೂ ಸರ್ಕಾರದ ಮುಂದಿಲ್ಲ.
-ಪಿ. ಮಣಿವಣ್ಣನ್‌, ಕಾರ್ಮಿಕ ಇಲಾಖೆ ಕಾರ್ಯದರ್ಶಿ

ಕಾರ್ಮಿಕರ ಕಲ್ಯಾಣ ನಿಧಿಯ ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಂಡು ನೆರೆ ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ಬಳಸಿಕೊಳ್ಳಬೇಕೆಂಬ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿದೆ. ಇದು ಸುಪ್ರೀಂಕೋರ್ಟ್‌ ನಿರ್ದೇಶನ ಮತ್ತು ಕಾಯ್ದೆಗೆ ವಿರುದ್ಧವಾಗಿದೆ. ಇದಕ್ಕೆ ಕಾರ್ಮಿಕ ಸಂಘಟನೆಗಳು ಅವಕಾಶ ನೀಡುವುದಿಲ್ಲ.
-ಎನ್‌. ಶಿವಣ್ಣ, ಎಐಟಿಯುಸಿ ಮುಖಂಡ

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next