Advertisement

ಕಲುಷಿತ ಪರಿಸರಕ್ಕೆ ಸರಕಾರದ ನಿರ್ಧಾರಗಳೂ ಕಾರಣ: ಸಚಿವ ಸುಧಾಕರ್‌

09:50 PM Apr 07, 2022 | Team Udayavani |

ಬೆಂಗಳೂರು: ಪರಿಸರದ ವಿಚಾರದಲ್ಲಿ ಸರಕಾರದ ಕೆಲವು ನಿರ್ಧಾರಗಳು, ವಾಣಿಜ್ಯ ಚಟುವಟಿಕೆ ಮತ್ತು ಕೈಗಾರಿಕೆಗಳಿಂದ ಆಮ್ಲಜನಕ, ಆಹಾರ, ನದಿಗಳು ಮತ್ತು ಸಮುದ್ರಗಳು ಕಲುಷಿತವಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ| ಕೆ. ಸುಧಾಕರ್‌ ತಿಳಿಸಿದರು.

Advertisement

ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಗುರುವಾರ ಆರೋಗ್ಯಸೌಧದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಸಾಯನಿಕ ಪದಾರ್ಥಗಳ ಬಳಕೆಯಿಂದ ಮಣ್ಣಿನ ಸತ್ವ ಕೂಡ ಕಡಿಮೆಯಾಗುತ್ತಿದೆ. ಪರಿಸರ ಕಾಪಾಡಿಕೊಳ್ಳಲು ಎಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಪ್ರತಿಯೊಬ್ಬ ವ್ಯಕ್ತಿಗೂ ಆಮ್ಲಜನಕ ಎಷ್ಟು ಮುಖ್ಯ ಎಂಬುದು ಕೊರೊನಾ ಸಂದರ್ಭದಲ್ಲಿ ಗೊತ್ತಾಗಿದೆ. ಆದ್ದರಿಂದ ನಮಗೆ ಇರುವ ಭೂಮಿಯನ್ನು ಕಾಪಾಡಿಕೊಳ್ಳೋಣ ಎಂದು ತಿಳಿಸಿದರು.

ಆರೋಗ್ಯ ಇಲಾಖೆ ಹಾಗೂ ವೈದ್ಯರು ರೋಗಕ್ಕೆ ಚಿಕಿತ್ಸೆ ನೀಡುವುದು ಸಾಮಾನ್ಯ. ಆದರೆ, ಆಸ್ಪತ್ರೆಗೆ ಹೋಗುವುದಕ್ಕೂ ಮೊದಲು “ನಮ್ಮ ಆರೋಗ್ಯ ನಮ್ಮ ಕೈಯಲ್ಲಿ’ ಎಂಬ ನಾಣ್ಣುಡಿಯನ್ನು ಪಾಲಿಸಬೇಕಿದೆ. ದಿನನಿತ್ಯದ ಚಟುವಟಿಕೆ, ಆಹಾರ ಪದ್ಧತಿ ಸಹಿತ ಜೀವನ ಶೈಲಿಯನ್ನು ಬದಲಿಸಿಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.

ತತ್ವಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಂಡು ಆರೋಗ್ಯ ವ್ಯವಸ್ಥೆಯನ್ನು ಸರಿಪಡಿಸಬೇಕಿದೆ.  ಜೆನಿಟಿಕ್ಸ್‌ ಆಧಾರವಾಗಿ ಯಾವ ರೋಗಿಗೆ ಎಷ್ಟು ದಿನದಲ್ಲಿ ಯಾವ ರೀತಿಯ ಖಾಯಿಲೆ ಲಕ್ಷಣಗಳು ಕಾಣಿಸಿಕೊಳ್ಳಬಹುದು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಆರಂಭದಲ್ಲಿ ರಾಜ್ಯದ ಎರಡು ಜಿಲ್ಲೆಗಳಲ್ಲಿ ಆರಂಭಿಸಲಾಗುತ್ತದೆ ಎಂದರು.

Advertisement

ಅಧಿಕಾರಿಗಳ ಗೈರು ಹಾಜರಿಗೆ ಗರಂ :

ಆರೋಗ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರು ಮತ್ತು ನಿರ್ದೇಶಕರು ಸಹಿತ ಉನ್ನತ ಅಧಿಕಾರಿಗಳು ಪಾಲ್ಗೊಳ್ಳದಿರುವುದಕ್ಕೆ ಸಚಿವ ಸುಧಾಕರ್‌ ಗರಂ ಆದರು. ಇಂತಹ ಪ್ರಮುಖ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳು ಪಾಲ್ಗೊಂಡಿಲ್ಲ ಎಂದರೆ ಅವರೆಷ್ಟು ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತದೆ. ನಾನು ಕೂಡ ಚಿಕ್ಕಬಳ್ಳಾಪುರಕ್ಕೆ ಕೆಡಿಪಿ ಸಭೆಗೆ ಹೋಗಬೇಕಿದೆ. ಆದರೂ ಬದ್ಧತೆಯಿಂದ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next