ಬೆಂಗಳೂರು: ದೇಶದಲ್ಲೇ ಪ್ರಥಮ ಎಂಬಂತೆ ನಗರದಲ್ಲಿ ಅತಿ ದೊಡ್ಡ 10,000 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ರೂಪುಗೊಂಡಿದ್ದು, ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಎಲ್ಲ ರೀತಿ ಪ್ರಯತ್ನಗಳನ್ನು ಕೈಗೊಳ್ಳುತ್ತಿದೆ ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ತುಮಕೂರು ರಸ್ತೆ ಮಾದಾವರ ಬಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಿರ್ಮಿಸಲಾಗಿರುವ ಕೋವಿಡ್ ಕೇರ್ ಸೆಂಟರ್‌ಗೆ ಗುರುವಾರ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ ಬಳಿಕ ಮಾತನಾಡಿದರು.
ದೇಶದಲ್ಲಿ 10,000ಕ್ಕೂ ಹೆಚ್ಚು ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಇದೇ ಮೊದಲು ಎನಿಸಿದೆ. ಈ ಕೇಂದ್ರಕ್ಕೆ ಅಗತ್ಯವಾದ ವೈದ್ಯರು, ಸಿಬ್ಬಂದಿಯನ್ನು ವ್ಯವಸ್ಥೆ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದ್ದು, ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಬೆಂಗಳೂರಿನಲ್ಲಿ ಕೋವಿಡ್ ತೀವ್ರಗತಿಯಲ್ಲಿ ಹೆಚ್ಚುತ್ತಿದ್ದು, ಅದರ ನಿಯಂತ್ರಣಕ್ಕೆ ಎಲ್ಲ ಕ್ರಮ ವಹಿಸಲಾಗುತ್ತಿದೆ. ನಿರೀಕ್ಷೆಯಂತೆ ಎಲ್ಲವೂ ಸಿದ್ಧ ವಾದರೆ 10,100 ಹಾಸಿಗೆ ಸಾಮರ್ಥಯದ ಕೋವಿಡ್ ಕೇರ್ ಸೆಂಟರ್ ರೂಪುಗೊಳ್ಳಲಿದೆ ಎಂದರು.
ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ: ತೋಟ ಗಾರಿಕೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್, ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್, ಬಿಬಿಎಂಪಿ ಜಂಟಿ ಆಯುಕ್ತ ಸಫì ರಾಜ್ ಖಾನ್, ನನ್ನ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಸೇರಿದಂತೆ ಎಲ್ಲರ ಶ್ರಮದಿಂದ ಒಳ್ಳೆಯ ವ್ಯವಸ್ಥೆ ಮಾಡಲು ಸಾಧ್ಯವಾಗಿದೆ ಎಂದು ಶ್ಲಾಘಿಸಿದರು.
ವಾರದೊಳಗೆ ಸಿದ್ಧ: ವಾರದೊಳಗೆ ಕೇಂದ್ರವು ಬಳಕೆಗೆ ಸಿದ್ಧವಾಗಲಿದೆ. ಆದರೆ ನಗರದಲ್ಲಿ ಗುರುತಿಸಲಾದ ಎಲ್ಲ ಹಾಸಿಗೆಗಳು ಭರ್ತಿಯಾದ ಬಳಿಕವಷ್ಟೇ ಈ ಕೇಂದ್ರದ ಬಳಕೆ ಆರಂಭ ವಾಗ ಲಿದೆ ಎಂದು ತಿಳಿಸಿದರು. ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಬಿ.ಶ್ರೀರಾಮುಲು, ಡಾ.ಕೆ.ಸುಧಾಕರ್, ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಇತರರಿದ್ದರು.
ರೋಗಿಗಳ ನೆರವಿಗೆ ರೊಬೊಟ್: ನಿರ್ದಿಷ್ಟ ಬ್ಲಾಕ್‌ಗೆ ಒಂದು ರೊಬೊಟ್ ವ್ಯವಸ್ಥೆ ಮಾಡಲಾಗಿದೆ. ರೋಗಿ ಗುಂಡಿ ಒತ್ತಿದ ಕೂಡಲೇ ರೊಬೊಟ್ ಅವರಿರುವ ಹಾಸಿಗೆ ಬಳಿಗೆ ಧಾವಿಸುತ್ತದೆ. ಅದರ ಮುಂದೆ ತಮ್ಮ ಆರೋಗ್ಯ ಸಮಸ್ಯೆಯನ್ನು ಹೇಳಿಕೊಂಡರೆ ತಕ್ಷಣವೇ ಸಂಬಂಧಪಟ್ಟ ವೈದ್ಯರಿಗೆ ಮಾಹಿತಿ ರವಾನೆಯಾಗಿ ಅದರ ಮಾನಿಟರ್‌ನಲ್ಲೇ ವೈದ್ಯರು ರೋಗಿಯೊಂದಿಗೆ ಸಂವಹನ ನಡೆಸುವ ವ್ಯವಸ್ಥೆ ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹಾಸಿಗೆ ಸಾಮರ್ಥ್ಯ: ಹಾಲ್ 1- 1200, ಹಾಲ್ 2- 1200, ಹಾಲ್ 3- 2100, ಹಾಲ್ 4- 2800, ಹಾಲ್ 5- 2800 ಪ್ರತಿ 100 ರೋಗಿಗಳಿಗೆ: ವೈದ್ಯ- 1, ದಾದಿಯರು- 2, ಸಹಾಯಕರು- 1, ಸ್ವಚ್ಛತಾ ಸಿಬ್ಬಂದಿ- 1, ಬಿಬಿಎಂಪಿ ಮಾರ್ಷಲ್- 2.
ಯಾವುದೇ ಕಾರಣಕ್ಕೂ ಜನ ವಿಶ್ವಾಸ ಕಳೆದುಕೊಳ್ಳಬಾರದು. ಸ್ವಲ್ಪ ತಾಳ್ಮೆಯಿಂದ ಸರ್ಕಾರದೊಂದಿಗೆ ಸಹಕರಿಸಬೇಕು. ಕೋವಿಡ್ ಪಾಸಿಟಿವ್ ಕಂಡುಬಂದ ಕೂಡಲೇ ಆ್ಯಂಬುಲೆನ್ಸ್ ತಲುಪುವುದು ವಿಳಂಬವಾದರೆ ಇಲ್ಲವೇ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ವಿನಾಕಾರಣ ನಿರಾಕರಿಸಿದರೆ ನಮ್ಮ ಗಮನಕ್ಕೆ ತರಬೇಕು. ಕೂಡಲೇ ಕ್ರಮ ಕೈಗೊಳ್ಳಲಾಗುವುದು.
-ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ