ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 4 ವರ್ಷ ಪೂರೈಸಲಿರುವ ಸಂದರ್ಭದಲ್ಲಿ ಚಿತ್ರದುರ್ಗದಲ್ಲಿ ಮೇ
13ರಂದು “ಸೌಲಭ್ಯ ವಿತರಣೆಯೇ ಸಂಭ್ರಮ- ಜನರಿಗೆ ಮನನ-ಜನರಿಗೆ ನಮನ’ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಸಮಾವೇಶದ ಉಸ್ತುವಾರಿಯನ್ನು ಸಮಾಜ ಕಲ್ಯಾಣ ಸಚಿವ ಆಂಜನೇಯ ವಹಿಸಿಕೊಂಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ ರಾಜ್ಯದಲ್ಲಿ ಸತತ ಬರ ಹಿನ್ನೆಲೆಯಲ್ಲಿ ಸಾಧನೆ ಸಮಾವೇಶ ಕೈಬಿಟ್ಟು ಫಲಾನುಭವಿಗಳಿಗೆ ಸವಲತ್ತು ವಿತರಿಸುವ ಮೂಲಕ ಸಾರ್ಥಕತೆ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ವಿವಿಧ ಜಿಲ್ಲೆಗಳ ಫಲಾನುಭವಿಗಳು: ಬೆಂಗಳೂರು ವಿಭಾಗದ ವ್ಯಾಪ್ತಿಗೆ ಬರುವ ರಾಮನಗರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳ ಫಲಾನುಭವಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ 3 ದಿನಗಳ ಕಾಲ ಸರ್ಕಾರದ ಸಾಧನೆ ಬಿಂಬಿಸುವ ವಸ್ತುಪ್ರದರ್ಶನ “ಮಾಹಿತಿ ಉತ್ಸವ’ ಏರ್ಪಡಿಸಲಾಗಿದೆ ಎಂದು ಆಂಜನೇಯ ತಿಳಿಸಿದರು.