ದೇವನಹಳ್ಳಿ: ರಾಜ್ಯದಲ್ಲಿ ಲಾಕ್‌ಡೌನ್ ಆರಂಭಗೊಂಡ ಮೇಲೆ 235 ಬಾಲ್ಯವಿವಾಹ ಗಳು ನಡೆದಿದ್ದು, ಅದರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 9 ಬಾಲ್ಯ ವಿವಾಹ ಪ್ರಕರಣಗಳು ಕಂಡುಬಂದಿರುವುದು ಆತಂಕಕಾರಿಯಾಗಿದೆ. ಅಂತಹವರ ವಿರುದ್ಧ ಕೂಡಲೇ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ, ವಿಕಲ ಚೇತನ ಹಾಗೂ ಹಿರಿಯ ನಾಗರಿಕರ ಇಲಾಖೆ ಸಚಿವೆ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.
ತಾಲೂಕಿನ ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರಿಕ ದಿವ್ಯಾಂಗರ ಇಲಾಖೆಯಿಂದ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 9 ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಂದಿದ್ದು, ಅದರಲ್ಲಿ 1 ಪ್ರಕರಣವನ್ನು ಪೋಕ್ಸೋ ಕಾಯ್ದೆ ಅಡಿಯಲ್ಲಿ ದಾಖಲಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೊಸರೂಪ ಕೊಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಈಗಾಗಲೇ ರೂಪಿಸುತ್ತಿದ್ದೇವೆ. ರಾಜ್ಯದಲ್ಲಿಯೇ ನಂ.1 ಇಲಾಖೆ ಎಂಬ ಹೆಗ್ಗಳಿಕೆಗೆ ತೆಗೆದುಕೊಂಡು ಹೋಗುವ ಕನಸು ಹೊತ್ತಿದ್ದೇನೆ. ಯಾವುದೇ ಮನೆಯಿಂದ ಪ್ರಾರಂಭವಾಗಬೇಕಾದರೆ ಅದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆಗಿರುತ್ತದೆ. ಬೆಳಗ್ಗೆ ಮಕ್ಕಳ ಪೌಷ್ಟಿಕ ಆಹಾರಕ್ಕೆ ಸಂಬಂಧಿಸಿದಂತೆ, ಹಿರಿಯ ಅಧಿಕಾರಿಗಳು ಹಾಗೂ ಪೌಷ್ಟಿಕ ಆಹಾರ ತಜ್ಞರ ಕರೆಸಿ ಸಭೆ ನಡೆಸಿದ್ದೇನೆ.
ಮುಂದಿನ ದಿನಗಳಲ್ಲಿ ಯಾವ ರೀತಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು ಎಂಬುವುದರ ಬಗ್ಗೆ ಮಾಹಿತಿ ಪಡೆದು ಮಕ್ಕಳು, ಅದನ್ನು ಸ್ವಾದಿಷ್ಟಕರವಾಗಿ ಸೇವಿಸುವಂತೆ ಆಗಬೇಕು. ಮಹಿಳೆಯರು ಗರ್ಭಿಣಿ ವ್ಯವಸ್ಥೆಯಿದ್ದಾಗ ಪೌಷ್ಟಿಕ ಆಹಾರಗಳು ಸೇವಿಸುವಂತೆ ಪ್ರೇರೆಪಿಸಬೇಕು. ಬಿಜೆಪಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಬಂದ ಮೇಲೆ ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ಸಾಕಷ್ಟು ಕಾರ್ಯಕ್ರಮ ರೂಪಿಸಿದೆ ಎಂದರು.
ದಮನಿತ ಮಹಿಳೆಯರು, ಎಚ್‌ಐವಿ ಸೋಂಕಿತ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು ಸಾಕಷ್ಟು ಸಂಕಷ್ಟದಲ್ಲಿದೆ. ಈಗಷ್ಟೇ ದಮನಿತ ಮಹಿಳೆಯರ ಸಭೆ ನಡೆಸಿದ್ದೇನೆ. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಒಂದು ಲಕ್ಷ ಕುಟುಂಬಗಳಿದ್ದು, ಅವರನ್ನು ಒಳ್ಳೆಯ ರೀತಿಯಲ್ಲಿ ಬದುಕು ರೂಪಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಲು ಸಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗಿದೆ ಎಂದರು.
ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಪಂ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಕನ್ಯಾಕುಮಾರಿ, ಮಹಿಳಾ ಅಭಿವೃದಿಟಛಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ.ಟೆಂಕ್ಲೆ, ಜಿಪಂ ಸಿಇಒ ಎನ್.ಎಂ.ನಾಗರಾಜ್, ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್. ಕೆ.ನಾಯಕ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪುಷ್ಪಾ ಜಿ.ರಾಯರ್ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.