Advertisement

ಸೋಂಕಿನಿಂದ ಸಾವನ್ನಪ್ಪಿದವರ ಅಸ್ಥಿ 15 ದಿನಗಳೊಳಗೆ ಪಡೆಯದಿದ್ದಲ್ಲಿ ಸರ್ಕಾರದಿಂದಲೇ ವಿಸರ್ಜನೆ

07:37 PM May 22, 2021 | Team Udayavani |

ಬೆಂಗಳೂರು :  ಕೋವಿಡ್ ಸೋಂಕಿನಿಂದ ಪ್ರಾಣ ಕಳೆದುಕೊಂಡವರ ಅಂತಿಮ ಕ್ರಿಯೆಯ ನಂತರದಲ್ಲಿ ಸಾವಿರಾರು ಜನರ ಅಸ್ಥಿಗಳು ಹಿಂಪಡೆಯದೆ ಚಿತಾಗಾರದಲ್ಲಿ ಹಾಗೇ ಉಳಿದುಕೊಂಡಿವೆ. ಇಂಥಹ ಚಿತಾಭಸ್ಮವನ್ನ 15 ದಿನಗಳ ನಂತರ ಸರ್ಕಾರವೇ ಗೌರವಪೂರ್ವಕವಾಗಿ ವಿಸರ್ಜನೆ ಮಾಡಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ ತಿಳಿಸಿದ್ದಾರೆ.

Advertisement

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು ,”ನಾನಾ ಕಾರಣಗಳಿಂದ ಸೋಂಕಿನಿಂದ ಸಾವನ್ನಪ್ಪಿದವರ ಚಿತಾಭಸ್ಮವನ್ನ ಅವರ ಕುಟುಂಬಸ್ಥರು ಇಂದಿಗೂ ಚಿತಾಗಾರದಿಂದ ತೆಗದುಕೊಂಡು ಹೋಗಿಲ್ಲ. ಈಗಾಗಲೇ ಸಾವಿರಕ್ಕೂ ಅಧಿಕ ಅಸ್ಥಿಗಳು ಚಿತಾಗಾರಗಳಲ್ಲಿ ಉಳಿದುಕೊಂಡಿವೆ. ಸಾಮಾನ್ಯವಾಗಿ ಒಂದೆರಡು ದಿನಗಳ ನಂತರ ಅವರ ಸಂಬಂಧಿಗಳು ಬಂದು ಅಸ್ಥಿ ತೆಗೆದುಕೊಂಡು ಹೋಗುತ್ತಾರೆ. ಆದರೆ ಕೆಲ ಪ್ರಕರಣಗಳಲ್ಲಿ ಹಲವು ದಿನಗಳಿಂದ ಸಂಬಂಧಿಸಿದವರು ಬರದೆ ಅನೇಕ ಅಸ್ಥಿಗಳು ಚಿತಾಗಾರಗಳಲ್ಲಿ ಹಾಗೇ ಉಳಿದುಕೊಂಡಿವೆ. ಈಗಾಗಲೇ ಸಂಬಂಧಿಸಿದವರನ್ನ ಕರೆ ಮಾಡಿ ಸಂಪರ್ಕಿಸಲು ಪ್ರಯತ್ನಿಸಲಾಗಿದ್ದು, ಅವರ ಫೋನ್ ನಂಬರ್ ಸ್ವಿಚ್ ಆಫ್ ಆಗಿವೆ. ಹೀಗಾಗಿ ಆ ಚಿತಾಭಸ್ಮವನ್ನ ಸರ್ಕಾರವೇ ಗೌರವಪೂರ್ವಕವಾಗಿ ವಿಸರ್ಜನೆ ಮಾಡುವ ನಿರ್ಧಾರ ಮಾಡಿದೆ”, ಎಂದು ತಿಳಿಸಿದರು.

ಇದನ್ನೂ ಓದಿ :ಕೋವಿಡ್ ಸಂಕಷ್ಟದಲ್ಲಿ ಮಗ ಮನೆಬಿಟ್ಟು ಹೋದರೂ ಎದೆಗುಂದದ ವೃದ್ಧೆಯ ಸ್ವಾವಲಂಬಿ ಬದುಕು

ಈ ಕುರಿತಂತೆ ಗಡುವು ನಿಗದಿಪಡಿಸಿದ್ದರ ಕುರಿತು ಮಾತನಾಡಿದ ಸಚಿವರು,”ಇನ್ನು ಮುಂದೆ ಸಂಬಂಧಿಸಿದವರ ಅಸ್ಥಿಗಳನ್ನ 15 ದಿನಗಳ ಕಾಲ ಕುಟುಂಬಸ್ಥರಿಗೆ ಹಸ್ತಾಂತರಿಸುವದಕ್ಕಾಗಿ ಕಾಯ್ದಿರಿಸಲಾಗುತ್ತದೆ. ಅಷ್ಟರೊಳಗೆ ಸಂಬಂಧಪಟ್ಟವರು ಬಂದು ತೆಗೆದುಕೊಂಡು ಹೋಗದಿದ್ದಲ್ಲಿ, ಅವರ ಪರವಾಗಿ ಸರ್ಕಾರವೇ ವಿಧಿವತ್ತಾಗಿ ಆ ಅಸ್ಥಿಗಳನ್ನ ನೀರಿನಲ್ಲಿ ವಿಸರ್ಜಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ 15 ದಿನಗಳೊಳಗೆ ಬಂದು ತಮ್ಮವರ ಚಿತಾಭಸ್ಮವನ್ನ ಪಡೆದುಕೊಂಡು ಹೋಗಬೇಕು,” ಎಂದು ಮನವಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next