Advertisement

ಸರಕಾರಿ ಬಾವಿ ದುರಸ್ತಿ ಮಾಡಿದ ಉದ್ಯಮಿ

05:58 PM May 24, 2019 | mahesh |

ಬಡಗನ್ನೂರು: ಪುತ್ತೂರು ತಾಲೂಕು ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುತ್ತಲೇ ಇದೆ. ಇರುವ ನೀರನ್ನು ಮಿತವಾಗಿ ಬಳಸಿ ದಿನ ಕಳೆಯುವ ಪರಿಸ್ಥಿತಿ ಬಂದಿದೆ. ನೀರಿನ ಆಶ್ರಯವಾಗಿದ್ದ ಕೊಳವೆ ಬಾವಿ, ಕೆರೆ ನೀರು ಕಡಿಮೆಯಾಗಿದೆ. ಒಳಮೊಗ್ರು ಗ್ರಾಮದಲ್ಲೂ ನೀರಿನ ತತ್ವಾರ ಜೋರಾಗಿಯೇ ಇದೆ.

Advertisement

ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆ ಇದೆ ಎನ್ನುವುದನ್ನು ಅರಿತುಕೊಂಡ ಕುಂಬ್ರದಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಇರುವ ಕೇರಳದ ಉದ್ಯಮಿಯೋರ್ವರು ಸರಕಾರಿ ಬಾವಿಯನ್ನು ದುರಸ್ತಿ ಮಾಡುವ ಮೂಲಕ ಗ್ರಾಮಸ್ಥರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಬಡಗನ್ನೂರು ಕುಂಬ್ರ ಸರಕಾರಿ ಕಾಲೇಜು ಬಳಿ 1991ರಲ್ಲಿ ನಿರ್ಮಾಣವಾದ ಸರಕಾರಿ ಭಾವಿಯಲ್ಲಿ ಇದುವರೆಗೂ ಬತ್ತಿದ ನಿದರ್ಶನವಿಲ್ಲ. ಬಾವಿಯಲ್ಲಿ ಹೂಳು, ಕಸ- ಕಡ್ಡಿ ತುಂಬಿದ ಕಾರಣ ಈ ಬಾರಿ ನೀರು ಕಡಿಮೆಯಾಗಿತ್ತು. ಕುಂಬ್ರದಲ್ಲಿ ರಿಂಗ್‌ ನಿರ್ಮಾಣದ ಉದ್ಯಮ ಮಾಡುತ್ತಿರುವ ಕೇರಳದ ಕೊಲ್ಲಂ ನಿವಾಸಿ ಪ್ರಮೋದ್‌ ಅವರು ಬಾವಿಯನ್ನು ಶುಚಿ ಮಾಡಿ, ನೀರಿನ ಬವಣೆ ನೀಗಿಸಲು ಅಳಿಲು ಸೇವೆ ಸಲ್ಲಿಸಿದ್ದಾರೆ.

17 ಸಾವಿರ ರೂ. ವ್ಯಯ
ಆರು ಕಾರ್ಮಿಕರನ್ನು ಕರೆಸಿ 17 ಸಾವಿರ ರೂ. ಖರ್ಚು ಮಾಡಿ ಬಾವಿಯಲ್ಲಿರುವ ಕೆಸರನ್ನು ತೆಗೆದು ಶುಚಿ ಮಾಡಿದ್ದಾರೆ. ಈ ಬಾವಿಯಿಂದ ಸ್ಥಳೀಯ ಕಾಲನಿ ನಿವಾಸಿಗಳು, ಹೊಟೇಲ್‌ ಮಾಲಕರು, ಬಾಡಿಗೆ ಮನೆಯಲ್ಲಿ ವಾಸ್ತವಿರುವ ಕುಟುಂಬಗಳು ನೀರು ಬಳಸುತ್ತಿದ್ದಾರೆ. ಬಾವಿಯನ್ನು ಶುಚಿ ಮಾಡಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದ ಇದ್ದರೂ ಯಾರೂ ಆ ಕೆಲಸಕ್ಕೆ ಮುಂದಾಗಿರಲಿಲ್ಲ. ದುರಸ್ತಿ ಬಳಿಕ ಬಾವಿಯಲ್ಲಿ ಧಾರಾಳವಾಗಿ ಶುದ್ಧ ನೀರು ಸಂಗ್ರಹವಾಗಿದೆ.

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಡಿಸಿಸಿ ಬ್ಯಾಂಕ್‌ ಮುಂಭಾಗದಲ್ಲಿದ್ದ ಸರಕಾರಿ ಬಾವಿಯನ್ನು ದುರಸ್ತಿಪಡಿಸಿ ಮೇಲ್ಗಡೆಗೆ ಮುಚ್ಚುಗಡೆ ಹಾಕಲಾಗಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಇರುವಾಗ ಬಾವಿಯ ಮುಚ್ಚಳವನ್ನು ತೆಗೆದು ದುರಸ್ತಿ ಮಾಡಿ ಅದರ ನೀರನ್ನು ಬಳಸಬಹುದಿತ್ತು. ಕುಕ್ಕುಮುಗೇರು ಶ್ರೀ ಕ್ಷೇತ್ರದ ಬಳಿಯ ಸಾರ್ವಜನಿಕ ಬಾವಿಯಲ್ಲೂ ಧಾರಾಳ ನೀರು ಇದ್ದು, ಅದನ್ನು ಗ್ರಾಮ ಪಂಚಾಯತ್‌ ದುರಸ್ತಿ ಮಾಡಿದಲ್ಲಿ ಅನುಕೂಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Advertisement

ಕಾಲನಿಗೆ ಮದ್ರಸದಿಂದ ನೀರು
ಒಳಮೊಗ್ರು ಗ್ರಾಮದ ಡಿಂಬ್ರಿ-ಮಗಿರೆ ಕಾಲನಿಗೆ ಸ್ಥಳೀಯ ತರ್ಬಿಯತ್ತುಲ್‌ ಇಸ್ಲಾಂ ಮದ್ರಸ ಸಮಿತಿಯವರು ಎರಡು ತಿಂಗಳಿನಿಂದ ನೀರು ನೀಡುತ್ತಿದ್ದಾರೆ. ಸುಮಾರು 10 ಕುಟುಂಬಗಳು ಇದರ ಪ್ರಯೋಜನವನ್ನು ಪಡೆಯುತ್ತಿದೆ.
ಗ್ರಾಮ ಪಂಚಾಯತ್‌ನಿಂದ ವಿತರಣೆಯಾಗುವ ಕುಡಿ ಯುವ ನೀರು ಈ ಭಾಗಕ್ಕೆ ಬಾರದೇ ಇದ್ದರೂ ಜನರಿಗೆ ಕುಡಿಯುವ ನೀರಿಗೆ ತೊಂದರೆ ಉಂಟಾಗದಂತೆ ಮದ್ರಸ ಸಮಿತಿಯವರು ವ್ಯವಸ್ಥೆ ಮಾಡುತ್ತಿದ್ದಾರೆ.

ಗ್ರಾಮಕ್ಕೆ ಆದರ್ಶಪ್ರಾಯರು
ಪ್ರಮೋದ್‌ ಅವರು ಮಾಡಿರುವ ಕೆಲಸ ಜನ ಮೆಚ್ಚುವ ಕೆಲಸವಾಗಿದೆ. ಗ್ರಾಮಸ್ಥರು ಮಾಡದ ಒಂದು ಕಾರ್ಯವನ್ನು ಕೇರಳದಿಂದ ಬಂದ ವ್ಯಕ್ತಿ ಮಾಡಿ ತೋರಿಸಿದ್ದಾರೆ. ಇವರು ಗ್ರಾಮಕ್ಕೆ ಆದರ್ಶವಾಗಿ¨ªಾರೆ. ಸರಕಾರಿ ಬಾವಿಗಳ ದುರಸ್ತಿ ಕಾರ್ಯ ಎಲ್ಲ ಕಡೆಗಳಲ್ಲಿ ನಡೆಯುವಂತಾಗಬೇಕು ಸರಕಾರ ಇದಕ್ಕೆ ಗ್ರಾ.ಪಂ.ಗೆ ವಿಶೇಷ ಅನುದಾನ ನೀಡಬೇಕು.
– ನಿತೀಶ್‌ ಕುಮಾರ್‌ ಶಾಂತಿವನ, ಗ್ರಾಮದ ಮುಖಂಡರು

ನೀರಿನಾಶ್ರಯ
ಬಾವಿಯಲ್ಲಿ ನೀರು ಕಡಿಮೆಯಾಗಿತ್ತು. ಸ್ಥಳೀಯರಿಂದ ಮಾಹಿತಿ ಪಡೆದು ಬಾವಿಯ ಕೆಸರೆತ್ತುವ ಮೂಲಕ ಅದಕ್ಕೆ ರಿಂಗ್‌ ಹಾಕುವ ಕೆಲಸವನ್ನು ಮಾಡಿದ್ದೇನೆ. ಸಾರ್ವಜನಿಕ ಬಾವಿ ಇದು ಎಂದೆಂದೂ ಹೀಗೆಯೇ ಉಳಿಯಬೇಕು. ಅಂದಿನಿಂದ ಇಂದಿನವರೆಗೆ ಉಳಿಸಿಕೊಂಡು ಬಂದ ಕಾರಣ ಈಗಲೂ ನೂರಾರು ಜನರಿಗೆ ಇದು ನೀರಿನಾಶ್ರಯವಾಗಿದೆ.
– ಪ್ರಮೋದ್‌, ಉದ್ಯಮಿ

Advertisement

Udayavani is now on Telegram. Click here to join our channel and stay updated with the latest news.

Next