ನವದೆಹಲಿ: ದ್ವಿತೀಯಾರ್ಧದ ಬಜೆಟ್ ಅಧಿವೇಶನದಲ್ಲಿ ಸರಕಾರ ಮತ್ತು ವಿರೋಧ ಪಕ್ಷಗಳ ಹಗ್ಗಜಗ್ಗಾಟದಿಂದ ಎಲ್ಲ ಕೆಲಸಗಳು ಸ್ಥಗಿತಗೊಳ್ಳುವ ಲಕ್ಷಣ ಕಂಡು ಬಂದಿದೆ. ಬುಧವಾರದ ದಿನವಿಡೀ ಮುಂದೂಡಲ್ಪಟ್ಟ ನಂತರ, ರಾಜ್ಯಸಭೆ ಮತ್ತು ಲೋಕಸಭೆಯು ಕೇಂದ್ರ ಬಜೆಟ್ 2023 ಕುರಿತು ಚರ್ಚಿಸಲು ಪುನಃ ಸೇರಿದ ಬಳಿಕ ಗುರುವಾರವೂ ಎರಡೂ ಕಡೆಯ ಪ್ರತಿಭಟನೆಯಿಂದಾಗಿ ಉಭಯ ಸದನಗಳ ಕಲಾಪವನ್ನು ಶುಕ್ರವಾರ 11 ಗಂಟೆಗೆ ಮುಂದೂಡಲಾಗಿದೆ.
ಅದಾನಿ ವಿಷಯದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಪ್ರತಿಪಕ್ಷಗಳು ಬೇಡಿಕೆಯನ್ನು ಎತ್ತಿದಾಗ, ಆಡಳಿತ ಪಕ್ಷಗಳು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ಮಾಡಿದ ಹೇಳಿಕೆಗೆ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು.
ಸದನದೊಳಗೆ ಮಾತನಾಡುತ್ತೇನೆ
”ಅವರು ನನಗೆ ಅವಕಾಶ ನೀಡಿದರೆ ನಾನು ಸದನದೊಳಗೆ ಮಾತನಾಡುತ್ತೇನೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಕ್ಷಮೆಯಾಚನೆಗೆ ಬಿಜೆಪಿಯ ಬೇಡಿಕೆಗಳ ಕುರಿತು ಪ್ರತಿಕ್ರಿಯಿಸಿ “ನಾನು ಯಾವುದೇ ಭಾರತ ವಿರೋಧಿ ಭಾಷಣ ಮಾಡಿಲ್ಲ”ಎಂದರು.
ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಸದಸ್ಯರು ಸ್ಪೀಕರ್ ಪೀಠದ ಸುತ್ತ ಕಪ್ಪು ರಿಬ್ಬನ್‌ನಿಂದ ಬಾಯಿ ಮುಚ್ಚಿಕೊಂಡು ಪ್ರತಿಭಟನೆ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಕಿರಣ್ ರಿಜಿಜು, ರಾಹುಲ್ ಗಾಂಧಿ ಯುಕೆಯಲ್ಲಿ ಸುಳ್ಳು ಹೇಳಿದ್ದಾರೆ ಮತ್ತು ರಾಷ್ಟ್ರವನ್ನು ಅವಮಾನಿಸಿದ್ದಾರೆ. ಈ ದೇಶದಲ್ಲಿ ಹೆಚ್ಚು ಮಾತನಾಡುವ ಮತ್ತು ಹಗಲು ರಾತ್ರಿ ಸರ್ಕಾರವನ್ನು ಗುರಿಯಾಗಿಸುವ ವ್ಯಕ್ತಿ, ಭಾರತದಲ್ಲಿ ಮಾತನಾಡಲು ಸ್ವಾತಂತ್ರ್ಯವಿಲ್ಲ ಎಂದು ವಿದೇಶದಲ್ಲಿ ಹೇಳುತ್ತಾರೆ ಎಂದರು.