Advertisement

ಸರ್ಕಾರಿ ಸೌಲಭ್ಯ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಿ

10:05 AM Jan 27, 2019 | Team Udayavani |

ಮುಳಬಾಗಿಲು: ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಪ್ರಜಾಪ್ರಭುತ್ವ ವ್ಯವಸ್ಥೆಯ ಹೆಮ್ಮೆಯ ದಿನಗಳಾಗಿದ್ದು, ಕಾರ್ಯಕ್ರಮಗಳನ್ನು ಮತ್ತಷ್ಟು ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು ಎಂದು ಶಾಸಕ ಎಚ್.ನಾಗೇಶ್‌ ತಿಳಿಸಿದರು.

Advertisement

ನಗರದ ನೇತಾಜಿ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಏರ್ಪಡಿಸಿದ್ದ 70ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, 1950ರ ಜ.26 ರಂದು ಭಾರತೀಯ ಸಂವಿಧಾನ ಜಾರಿಗೆ ಬಂತು. ನೂರಾರು ವರ್ಷಗಳ ನಂತರ ಭಾರತೀಯರೆಲ್ಲರೂ ಶಾಸನಾತ್ಮಕವಾಗಿ ಒಂದೇ ಸರ್ಕಾರದಡಿಯಲ್ಲಿ ಕಾರ್ಯನಿರ್ವಹಿಸುವಂತಾಗಿದೆ. ಈ ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸುತ್ತಿದ್ದು, ಮುಂದೆ ಎಲ್ಲಾ ರಾಷ್ಟ್ರೀಯ ಹಬ್ಬಗಳನ್ನು ಇನ್ನಷ್ಟು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಹೇಳಿದರು.

ಉತ್ತಮ ಸಮಾಜ ನಿರ್ಮಿಸಿ: ದೇಶದಲ್ಲಿ ಎಷ್ಟೋ ಸರ್ಕಾರಗಳು ಆಡಳಿತ ನಡೆಸಿದರೂ ಬಡತನ ಸಂಪೂರ್ಣವಾಗಿ ನಿರ್ಮೂಲನೆಯಾಗುತ್ತಿಲ್ಲ. ಅದಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರೂ ಮದ್ಯವರ್ತಿಗಳ ಹಾವಳಿಯಿಂದ ಕಟ್ಟ ಕಡೆಯ ವ್ಯಕ್ತಿಗೆ ತಲುಪುದೇ ಇಂದಿಗೂ ಬಡತನದಲ್ಲಿಯೇ ಬಾಳುವಂತಾಗಿದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡಬೇಕಾಗಿದೆ ಎಂದರು.

ಉದ್ಯೋಗ ಮೇಳ: ತಾನು ಕೇವಲ ಆಶ್ವಾಸನೆ ಕೊಡುವ ಶಾಸಕ ಅಲ್ಲ, ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕಾಗಿ ಶ್ರಮಿಸುತ್ತಿದ್ದು, ತಮ್ಮ ಅಧಿಕಾರದ ಅವಧಿಯಲ್ಲಿ ನಿರಾಶ್ರಿತರಿಗೆಲ್ಲರಿಗೂ ಸೂರು ಒದಗಿಸಲಾಗುವುದು. ಯುವಕರಿಗೆ ಉದ್ಯೋಗಾವಕಾಶ ಒದಗಿಸಲು ಶೀಘ್ರವೇ 50 ಕಂಪನಿಗಳನ್ನು ಕರೆಸಿ ಉದ್ಯೋಗಮೇಳ ನಡೆಸಲಾಗುವುದು ಎಂದು ಹೇಳಿದರು.

ವಿವಿಧ ಶಾಲಾ ಮಕ್ಕಳಿಂದ ಧ್ವಜವಂದನೆ ಸ್ವೀಕರಿಸಿದರು. ನಂತರ ನಗರದ ಲಕ್ಷ್ಮಮ್ಮ, ಬಾಲನಾಗಮ್ಮ, ಮಸ್ತಾನವಳ್ಳಿಯಮ್ಮ, ವೀರಸಂದ್ರ ವೆಂಕಟಮ್ಮ ಸೇರಿದಂತೆ ನಾಲ್ವರಿಗೆ ಹಕ್ಕು ಪತ್ರಗಳನ್ನು ವಿತರಿಸಲಾಯಿತು. ತಹಶೀಲ್ದಾರ್‌ ಬಿ.ಎನ್‌. ಪ್ರವೀಣ್‌, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಕೆ.ವಿ.ಪುರುಷೋತ್ತಮ್‌ ಗಣರಾಜ್ಯದ ಬಗ್ಗೆ ಮಾಹಿತಿ ನೀಡಿದರು. ಪೊಲೀಸ್‌, ಎನ್‌ಸಿಸಿ, ಸ್ಕೌಟ್ಸ್‌ ಹಾಗೂ ಗೈಡ್ಸ್‌ ಮತ್ತು ವಿದ್ಯಾರ್ಥಿಗಳು ನಡೆಸಿಕೊಟ್ಟ ಪಥ ಸಂಚಲನ, ನೃತ್ಯ ಕಾರ್ಯಕ್ರಮ ಗಮನ ಸೆಳೆಯಿತು. ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್‌, ಪೌರಾಯುಕ್ತ ಶ್ರೀನಿವಾಸ್‌ಮೂರ್ತಿ, ಇಒ ಡಾ.ಕೆ.ಸರ್ವೇಶ್‌, ನಗರ ಸಭೆ ಅಧ್ಯಕ್ಷ ಎಂ. ಆರ್‌. ಮುರಳಿ, ಸಿಪಿಐ ಮಾರ್ಕೊಂಡ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಶ್ರೀನಿವಾಸ್‌ಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಜಗನ್ನಾಥ್‌, ಬಿ.ಕೆ.ವೆಂಕಟ್ನಾರಾಯಣ, ತಾಲೂಕು ಅಧ್ಯಕ್ಷ ಶಿವಣ್ಣ, ತಾಪಂ ಸದಸ್ಯರಾದ ಹರೀಶ್‌, ಶ್ರೀನಾಥ್‌, ಕವತನಹಳ್ಳಿ ಮುನಿಶಾಮಿಗೌಡ, ಮಾಜಿ ಸದಸ್ಯೆ ಲಕ್ಷ್ಮೀದೇವಮ್ಮ, ರೋಷನ್‌ ಟ್ರಸ್ಟ್‌ ಜಬೀವುಲ್ಲಾ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next