Advertisement
ಭೂಕಂಪದ ಭಯದೊಂದಿಗೆ ಆಯಾ ಕಾಲಕ್ಕೆ ತಕ್ಕಂತೆ ಮಳೆ, ಚಳಿ, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮನೆ ಎದುರಲ್ಲೇ ಶೆಡ್ ನಿರ್ಮಿಸಿಕೊಡಿ ಎಂದು ಗಡಿಕೇಶ್ವಾರ ಮತ್ತು ಸುತ್ತಲಿನ ಗ್ರಾಮಗಳ ಜನರು ಗ್ರಾಮಕ್ಕೆ ಭೇಟಿ ನೀಡಿದ್ದ ಸಚಿವರಲ್ಲಿ, ವಿರೋಧ ಪಕ್ಷದ ನಾಯಕರಲ್ಲಿ, ಸಂಸದರಲ್ಲಿ, ಅಧಿಕಾರಿಗಳಲ್ಲಿ, ವಿವಿಧ ಪಕ್ಷಗಳ ಮುಖಂಡರಲ್ಲಿ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ಮೂರು ಕೋಟಿ ರೂ.ಗಳನ್ನು ಮಂಜೂರಿಗೊಳಿಸಿದೆ.
Related Articles
Advertisement
ಇದಕ್ಕೂ ಮುನ್ನ ಭೂಕಂಪದ ಭಯದಿಂದ ಗ್ರಾಮಸ್ಥರು ಊರನ್ನೇ ತೊರೆದು ನೆಂಟರ ಮನೆಗಳಿಗೆ ಹೋಗಿದ್ದರು. ಆನಂತರ ಸರ್ಕಾರ ಗಡಿಕೇಶ್ವಾರ, ಹೊಸಳ್ಳಿ(ಎಚ್), ರಾಮನಗರ (ಕೊರವಿ) ತಾಂಡಾದಲ್ಲಿ ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಿ ಗ್ರಾಮಸ್ಥರಿಗೆ ಉಪಹಾರ, ಊಟದ ವ್ಯವಸ್ಥೆ ಮಾಡಿತ್ತು. ಆ ನಂತರ ಈ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿತ್ತು.
ಗ್ರಾಮಸ್ಥರ ಹರ್ಷ
ಗಡಿಕೇಶ್ವಾರ ಗ್ರಾಮದಲ್ಲಿ ಭೂಕಂಪದ ಹೆದರಿಕೆಯಲ್ಲಿಯೇ ಬದುಕುತ್ತಿದ್ದ ಜನರ ಬಗ್ಗೆ ಸರ್ಕಾರಕ್ಕೆ ಮನವರಿಕೆ ಆಗಿದ್ದರಿಂದ ಶೆಡ್ ನಿರ್ಮಿಸಲು 3ಕೋಟಿ ರೂ. ಪರಿಹಾರ ನಿಧಿ ಮಂಜೂರಿ ಮಾಡಿರುವುದು ಸಂತಸವಾಗಿದೆ ಎಂದು ಗ್ರಾಮಸ್ಥರಾದ ರೇವಣಸಿದ್ಧಪ್ಪ ಅಣಕಲ್, ಸಂತೋಷ ಬಳಿ, ಸುರೇಶ ಪಾಟೀಲ ರಾಯಕೋಡ ಮತ್ತಿತರರು ಹರ್ಷ ವ್ಯಕ್ತಪಡಿಸಿದ್ದಾರೆ.
ಚಿಂಚೋಳಿ ತಾಲೂಕಿನ ಭೂಕಂಪ ಪೀಡಿತ ಗಡಿಕೇಶ್ವಾರ ಗ್ರಾಮಸ್ಥರ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ಅವರ ಮನೆಯ ಅಂಗಳದ ಎದುರು ತಾತ್ಕಾಲಿಕ ಟಿನ್ ಶೆಡ್ ನಿರ್ಮಿಸಲು ಸರ್ಕಾರದಿಂದ ಮೂರು ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ ಬಿಡುಗಡೆ ಮಾಡಿದ್ದಾರೆ. ಭೂಕಂಪ ಸಂದರ್ಭದಲ್ಲಿ ಗಡಿಕೇಶ್ವಾರ ಸೇರಿದಂತೆ ಎಲ್ಲ ಗ್ರಾಮಗಳಿಗೂ ಭೇಟಿ ನೀಡಿ, ಗ್ರಾಮ ವಾಸ್ತವ್ಯ ಮಾಡಿ ಸರ್ಕಾರಕ್ಕೆ ಇಲ್ಲಿನ ಸಂಕಷ್ಟ ಮನವರಿಕೆ ಮಾಡಿದ್ದೆ. ಸರ್ಕಾರ ಮನವಿಗೆ ಸ್ಪಂದಿಸಿದ್ದು ಸಂತಸ ತಂದಿದೆ. -ಡಾ| ಉಮೇಶ ಜಾಧವ, ಸಂಸದ, ಕಲಬುರಗಿ
ಗಡಿಕೇಶ್ವರ ಗ್ರಾಮಸ್ಥರು ಚಳಿ, ಮಳೆ, ಬಿಸಿಲು ಎನ್ನದೇ ಯಾವಾಗ ಭೂಮಿ ಕಂಪಿಸುತ್ತದೆಯೋ ಎಂದು ಹೆದರಿ ತಮ್ಮ ಮನೆ ಎದುರು ತಾಡಪತ್ರಿ ಹಾಕಿಕೊಂಡು ಜೀವನ ಸಾಗಿಸುತ್ತಿದ್ದರು. ಈಗ ಸರ್ಕಾರವೇ ಮನೆ ಎದುರು ಶೆಡ್ ನಿರ್ಮಿಸುತ್ತಿರುವುದು ಹರ್ಷದ ಸಂಗತಿಯಾಗಿದೆ. -ಅಶೋಕ ರಂಗನೂರ, ಹೋರಾಟಗಾರ
-ಶಾಮರಾವ ಚಿಂಚೋಳಿ