Advertisement

ಕರಾವಳಿಯಲ್ಲಿ “ಯಕ್ಷ ರಂಗ’ಸ್ಥಾಪನೆಗೆ ಸರಕಾರದ ಚಿಂತನೆ

12:50 AM Jan 13, 2020 | Team Udayavani |

ಮಂಗಳೂರು: ರಂಗಭೂಮಿ ಚಟುವಟಿಕೆ ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಥಾಪನೆಯಾಗಿರುವ ರಂಗಾಯಣಗಳ ಮಾದರಿಯಲ್ಲಿಯೇ ಯಕ್ಷಗಾನ ಕೇಂದ್ರಿತವಾಗಿ ಉಳಿದ ರಂಗ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ “ಯಕ್ಷ ರಂಗ’ ರೆಪರ್ಟರಿಯನ್ನು ಕರಾವಳಿಯಲ್ಲಿ ಸ್ಥಾಪಿಸಲು ಸರಕಾರ ಮುಂದಾಗಿದೆ.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಇದು ರೂಪುಗೊಳ್ಳಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಮುಂದಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡುವ ಸಾಧ್ಯತೆಯಿದೆ.
ರಂಗಾಯಣಗಳು ಸದ್ಯ ಮೈಸೂರು, ಶಿವಮೊಗ್ಗ, ಧಾರವಾಡ, ಗುಲ್ಬರ್ಗಗಳಲ್ಲಿ ಕಾರ್ಯಾಚರಿಸುತ್ತಿವೆ. ಇಲ್ಲಿ ರಂಗಭೂಮಿಗೆ ಸಂಬಂಧಿಸಿ ಕಾರ್ಯಕಲಾಪಗಳು ನಡೆಯುತ್ತವೆ. ಇದೇ ಮಾದರಿಯಲ್ಲಿ ಯಕ್ಷಗಾನವನ್ನು ಪ್ರಧಾನವಾಗಿಸಿ ಉಳಿದ ರಂಗ ಚಟುವಟಿಕೆ ಪ್ರೋತ್ಸಾಹಿಸಲು “ಯಕ್ಷ ರಂಗ’ವನ್ನು ಪರಿಚಯಿಸಲಾಗುತ್ತದೆ.

ಕರಾವಳಿಯ ಕನ್ನಡ, ತುಳು, ಕೊಂಕಣಿ, ಬ್ಯಾರಿ ಸೇರಿದಂತೆ ವಿವಿಧ ಭಾಷಿಕ ಕಲಾ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುತ್ತ, ಯಕ್ಷಗಾನವನ್ನು ಮೂಲ ಸೆಲೆಯಾಗಿರಿಸಿ ರಾಜ್ಯವ್ಯಾಪಿ “ಯಕ್ಷ ರಂಗ’ದ ವಿನೂತನ ಪರಿಕಲ್ಪನೆಗಳನ್ನು ತಿರುಗಾಟವಾಗಿ ಒಯ್ಯಲು ಅವಕಾಶವಿದೆ.

ದ.ಕ. ಮತ್ತು ಉಡುಪಿ ಭಾಗದಲ್ಲಿ ಯಕ್ಷಗಾನ ತರಬೇತಿ ನೀಡುವ ಹಲವು ಖ್ಯಾತ ಸಂಸ್ಥೆಗಳಿವೆ. ಶಾಲಾ-ಕಾಲೇಜು, ಸಂಘ ಸಂಸ್ಥೆಗಳ ಮೂಲಕವೂ ಯಕ್ಷಗಾನ ಸಂಬಂಧಿ ಚಟುವಟಿಕೆಗಳು ನಡೆಯುತ್ತಿದೆ. ಆದರೆ ಯಕ್ಷಗಾನ ಕಲಿಕೆಯ ಜತೆಗೆ ರಂಗಭೂಮಿ ಪೂರಕ ಚಟುವಟಿಕೆಗಳು ಜತೆಯಾಗಿ ನಡೆಯುತ್ತಿಲ್ಲ. ಹೀಗಾಗಿ ಯಕ್ಷಗಾನವನ್ನು ಪ್ರಧಾನವಾಗಿಟ್ಟುಕೊಂಡು ರಂಗಭೂಮಿಯನ್ನು ಜತೆಯಾಗಿಸಿ ಒಂದೇ ಸೂರಿನಡಿ ಅಧ್ಯಯನ, ತರಬೇತಿ, ಕಾರ್ಯಕಲಾಪ ರೂಪಿಸಲು “ಯಕ್ಷ ರಂಗ’ದಲ್ಲಿ ಅವಕಾಶ ನೀಡುವ ಸಾಧ್ಯತೆಯಿದೆ. ಇದು ಯಕ್ಷಗಾನ ಮತ್ತು ರಂಗಭೂಮಿಯ ಅಭ್ಯುದಯಕ್ಕೆ ಹೊಸ ವೇದಿಕೆಯಾಗಲಿದೆ ಎನ್ನು ತ್ತಾರೆ ರಂಗಕರ್ಮಿ ಜೀವನ್‌ರಾಮ್‌ ಸುಳ್ಯ.

ಈ ನಡುವೆ, ಜಯಮಾಲಾ ಅವರು ಸಚಿವ ರಾಗಿದ್ದಾಗ ಉಡುಪಿಯಲ್ಲಿ ರಂಗಾಯಣ ನಿರ್ಮಾಣಕ್ಕೆ 2018ರ ಡಿಸೆಂಬರ್‌ನಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಬಳಿಕ ಇದರ ನಿರೀಕ್ಷಿತ ಕಾಮಗಾರಿ ನಡೆದಿಲ್ಲ.

Advertisement

ಪುತ್ತೂರಿನಲ್ಲಿ “ಯಕ್ಷ ರಂಗ’?
ಕಾಸರಗೋಡಿನಿಂದ ಕಾರವಾರದ ವರೆಗಿನ ವ್ಯಾಪ್ತಿಯನ್ನು ಪರಿಗಣಿಸಿ “ಯಕ್ಷ ರಂಗ’ ನಿರ್ಮಿಸಲು ಉದ್ದೇಶಿಸಲಾಗಿದೆ. ಹೀಗಾಗಿ ಇದರ ಕೇಂದ್ರ ಎಲ್ಲಿರಬೇಕು ಎಂಬ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಸ್ಥಳ ಪರಿಶೀಲನೆ ನಡೆಯುತ್ತಿದೆ. ಆದರೆ ಪುತ್ತೂರಿನ ಡಾ| ಶಿವರಾಮ ಕಾರಂತ ಬಾಲವನದಲ್ಲಿ ಕೇಂದ್ರ ಸ್ಥಾಪನೆಗೆ ಸರಕಾರ ಆಸಕ್ತಿ ವಹಿಸಿದೆ. ಕೋಟದ ಥೀಮ್‌ ಪಾರ್ಕ್‌ ಅಥವಾ ಮಂಗಳೂರು, ಉಡುಪಿಯ ಸೂಕ್ತ ಜಾಗದಲ್ಲಿಯೂ ಇದಕ್ಕೆ ಜಮೀನು ನಿಗದಿ ಮಾಡುವ ಸಾಧ್ಯತೆಯಿದೆ.

ಯಕ್ಷಗಾನ ಕೇಂದ್ರಿತವಾಗಿ ಉಳಿದ ರಂಗಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರಾವಳಿಯಲ್ಲಿ ರಂಗಾಯಣ ಸ್ವರೂಪದ “ಯಕ್ಷ ರಂಗ’ ಆರಂಭಿಸಲು ತೀರ್ಮಾನಿಸಲಾಗಿದೆ. ಮುಂದಿನ ಬಜೆಟ್‌ನಲ್ಲಿ ಇದಕ್ಕೆ ಅನುದಾನ ಮೀಸಲಿಡಲಾಗುವುದು. ಬಳಿಕ ಸ್ಥಳ ನಿಗದಿಪಡಿಸಲಾಗುವುದು.
 - ಸಿ.ಟಿ. ರವಿ, ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next