ಬೆಂಗಳೂರು: ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ರದ್ದುಗೊಂಡಿದ್ದ ಒಂದರಿಂದ ಒಂಭತ್ತನೇ ತರಗತಿ ಪರೀಕ್ಷೆಗಳು ಈ ಬಾರಿ ನಡೆಯುವ ಸಾಧ್ಯತೆ ಹೆಚ್ಚಿದೆ.
ವಿಚಿತ್ರವೆಂದರೆ, ಈ ವರ್ಷವೂ ಕೊರೊನಾ ಕಾರಣದಿಂದಾಗಿ ಪಾಠ ಪ್ರವಚನ ಸರಿಯಾಗಿ ನಡೆದಿಲ್ಲ. ಆದರೂ, ಮಕ್ಕಳ ಕಲಿಕಾ ಸಾಮರ್ಥ್ಯದ ದೃಷ್ಟಿಯಿಂದ ಪರೀಕ್ಷೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಪೋಷಕರೂ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಮಾಲೋಚನೆ ನಡೆಸುತ್ತಿದೆ.
ಕೊರೊನಾ ಸೋಂಕು ಕಾಣಿಸಿಕೊಂಡ ಮೇಲೆ, ಎರಡು ವರ್ಷಗಳ ಕಾಲ ತರಗತಿ ಸರಿಯಾಗಿ ನಡೆದಿಲ್ಲ. ಎರಡೂ ವರ್ಷ ಪರೀಕ್ಷೆ ರದ್ದುಗೊಂಡಿದೆ. ಹೀಗಾಗಿಯೇ ಮಕ್ಕಳ ಕಲಿಕಾ ಗುಣಮಟ್ಟವೂ ಕುಸಿತವಾಗಿದೆ. ಮಕ್ಕಳು ಮನೆಯಲ್ಲೇ ಆನ್‌ಲೈನ್ ಪಾಠ ಕೇಳಿರುವುದರಿಂದ ಅವರಲ್ಲಿನ ಆಸಕ್ತಿ ಮತ್ತು ಉತ್ಸಾಹವೂ ಕುಂಠಿತವಾಗಿದೆ ಎಂಬ ಆತಂಕ ಪೋಷಕರಲ್ಲಿದೆ. ಹೀಗಾಗಿ, ಈ ವರ್ಷ ಪರೀಕ್ಷೆ ಮಾಡಿದರೆ, ವಿದ್ಯಾರ್ಥಿಗಳಿಗೂ ಒಳ್ಳೆಯದಾಗುತ್ತದೆ ಎಂಬ ಅಭಿಪ್ರಾಯವಿದೆ.
ಇದನ್ನೂ ಓದಿ:ಸಿಎಂ ಮನೆ ಭದ್ರತೆಗೆ ನಿಯೋಜನೆಗೊಂಡಿದ್ದ 2 ಕಾನ್‌ಸ್ಟೇಬಲ್‌ಗಳು ಪರಪ್ಪನ ಅಗ್ರಹಾರದಲ್ಲಿ ಬಂಧಿ
ಮಾ.28ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಲಿವೆ. ಅಷ್ಟರೊಳಗೆ 1ರಿಂದ 9ನೇ ತರಗತಿ ಪರೀಕ್ಷೆಗಳನ್ನು ಮುಗಿಸಬೇಕಿದೆ. ಪರೀಕ್ಷೆ ಸಮೀಪಿಸುತ್ತಿದೆ. ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಗುಂಪು ಚರ್ಚೆ, ಪರೀಕ್ಷಾ ವಿಷಯಗಳ ಚರ್ಚೆ ನಡೆಸುವ ಜೊತೆಗೆ ಆನ್‌ಲೈನ್ ತರಗತಿಗಳಲ್ಲಿ ಅರ್ಥವಾಗದ ಪಾಠಗಳನ್ನು ಮತ್ತೂಮ್ಮೆ ಪುನರಾವರ್ತನೆ ಮಾಡುವುದಕ್ಕಾಗಿ ಶಾಲೆ ಮುಚ್ಚಿರುವ ಕಡೆಗಳಲ್ಲಿ ತರಗತಿಗಳನ್ನು ತೆರೆಯುವುದು ಉತ್ತಮ ಎಂದು ಶಿಕ್ಷಕರಾದ ಯೋಗೇಶ್ ಹೇಳುತ್ತಾರೆ.
ಎಷ್ಟೇ ಹೊಸ ಅಲೆಗಳು ಬಂದರೂ ಶಾಲೆಗಳನ್ನು ಮುಚ್ಚುವುದು ಕೊನೆಯ ಅಸ್ತ್ರವಾಗಿ, ಶಾಲೆಗಳನ್ನು ತೆರೆಯುವುದು ಮೊದಲ ಆದ್ಯತೆಯಾಗಬೇಕು. ಎಲ್ಲವನ್ನೂ ತೆರೆದು ಶಾಲೆಗಳನ್ನು ಮುಚ್ಚುವುದರ ಹಿಂದೆ ಕೇವಲ ಭಯವೇ ವಿನಾ ವೈಜ್ಞಾನಿಕ ಕಾರಣಗಳಿಲ್ಲ.
– ಡಾ. ವಿ.ಪಿ. ನಿರಂಜನಾರಾಧ್ಯ, ಶಿಕ್ಷಣ ತಜ್ಞ
-ಎನ್.ಎಲ್.ಶಿವಮಾದು