ಕಲಬುರಗಿ: ಈ ಭಾಗವನ್ನು ಕಲ್ಯಾಣ ಕರ್ನಾಟಕವೆಂದು ನಾಮಕರಣಗೊಳಿಸಿ ಎರಡು ವರ್ಷಗಳಾದರೂ ಪ್ರಾಮಾಣಿಕ ನಿಟ್ಟಿನಲ್ಲಿ ಹೇಳಿಕೊಳ್ಳುವಂತ ಯಾವುದೇ ಕಾರ್ಯಗಳಾಗುತ್ತಿಲ್ಲ ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಟೀಕಿಸಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ನೇಮಕಾತಿ ಪ್ರಕ್ರಿಯೆಗೆ ಸ್ಪಷ್ಟ ನಿಯಮ ರೂಪಿಸಲಾಗದ ಕಾರಣಕ್ಕಾಗಿ ದುಸ್ಥಿತಿ ನಿರ್ಮಾಣವಾಗಿದೆ. 371ನೇ (ಜೆ) ಪ್ರಾಮಾಣಿಕ ಅನುಷ್ಠಾನಕ್ಕೆ ಒತ್ತು ನೀಡಿದಾಗ ಮಾತ್ರ ಖಾಲಿ ಉಳಿದಿರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗುತ್ತದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀ; ನರಿಬೋಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿಂದೆ ಈ ಭಾಗಕ್ಕೆ ಮಂಜೂರಾಗಿದ್ದ ಟೆಕ್ಸ್‌ಟೈಲ್‌ಪಾರ್ಕ್, ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ (ನಿಮ್j) ಸ್ಥಾಪನೆ ಆಗದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಪಿತೂರಿ ನಡೆಸಿದ್ದರಿಂದ ಮಹತ್ವಾಕಾಂಕ್ಷಿ ಯೋಜನೆಗಳು ಕೈತಪ್ಪಿವೆ. ಕಲಬುರಗಿ ರೈಲ್ವೆ ವಲಯ ಸ್ಥಾಪನೆಯ ವಿಚಾರದಲ್ಲಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸುವಲ್ಲಿ ಸ್ಥಳೀಯ ರಾಜಕೀಯ ಪ್ರತಿನಿಧಿಗಳು ವಿಫಲರಾದ ಹಿನ್ನೆಲೆಯಲ್ಲಿ ಅದು ಕೈ ತಪ್ಪಿದೆ.
ಇಷ್ಟೆಲ್ಲ ಮಾರಕ ಹೊಡೆತಗಳನ್ನು ಒಂದಾದ ಮೇಲೆ ಒಂದರಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಭಾಗಕ್ಕೆ ನೀಡುತ್ತಲೇ ಬಂದಿವೆ. ಇಂತಹ ಹೊತ್ತಿನಲ್ಲಿ ರಾಯಚೂರು ಜಿಲ್ಲೆಯನ್ನು ತೆಲಂಗಾಣ ರಾಜ್ಯಕ್ಕೆ ಸೇರ್ಪಡೆ ಮಾಡಬೇಕೆಂಬ ರಾಜಕೀಯ ಒತ್ತಾಸೆಯ ಹೇಳಿಕೆಗಳು ಹೊರಬೀಳುತ್ತಿದ್ದರೂ ಸರ್ಕಾರದಿಂದ ಯಾವುದೇ ಅಧಿಕೃತ ಖಂಡನಾ ಹೇಳಿಕೆ ಈವರೆಗೆ ಹೊರಬಿದ್ದಿಲ್ಲ. ಇದು ರಾಜ್ಯ ಸರಕಾರದ ಈ ನಿಷ್ಕ್ರೀಯ ಧೋರಣೆಗೆ ಕನ್ನಡಿ ಹಿಡಿದಂತಿದೆ ಎಂದಿದ್ದಾರೆ.
ಸರ್ಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ನವೆಂಬರ್ 1ರಂದು ಆಚರಿಸಲಾಗುವ ಕನ್ನಡ ರಾಜ್ಯೋತ್ಸವ ದಿನದಂದು ಪ್ರತ್ಯೇಕ ರಾಜ್ಯ ಧ್ವಜಾರೋಹಣ ನೆರವೇರಿಸಲು ನಿರ್ಧರಿಸಲಾಗಿದೆ. ಜೊತೆಗೆ, ಪ್ರತ್ಯೇಕ ರಾಜ್ಯ ಸ್ಥಾಪನೆಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರಂತರ ಜನಾಭಿಪ್ರಾಯ ಸಂಗ್ರಹ ಸಭೆ, ಹೋರಾಟ ಮತ್ತು ಜನಜಾಗೃತಿ ಸಭೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.