ಬೀಳಗಿ: ಕೃಷ್ಣಾ ಮೆಲ್ದಂಡೆ ಯೋಜನೆಯ 1 ಮತ್ತು 2 ಯೋಜನೆಗಳ ಅಪೂರ್ಣ ಕೆಲಸಗಳು ಮತ್ತು 3ನೇ ಹಂತ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎಲ್ಲ ಮುಳುಗಡೆ ಸಂತ್ರಸ್ತ ರೈತರು, ಸಾರ್ವಜನಿಕರು ಸೇರಿ ಬೃಹತ್ ಉಗ್ರ ಹೋರಾಟ ಮಾಡಲು ಸಿದ್ಧರಾಗಬೇಕು ಎಂದು ಮುಖಂಡ ಬಸವಪ್ರಭು ಸರನಾಡಗೌಡ ಹೇಳಿದರು.
ಕೊರ್ತಿ ಸಮುದಾಯ ಭವನದಲ್ಲಿ ಬುಧವಾರ ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ಹಮ್ಮಿಕೊಂಡಿದ್ದ ಅವಳಿ ಜಿಲ್ಲೆಗಳ ಯುಕೆಪಿ 3ನೇ ಹಂತದ ಶೀಘ್ರ ಅನುಷ್ಠಾನಕ್ಕಾಗಿ ಫಲಾನುಭವಿಗಳು ಮತ್ತು ಮುಳುಗಡೆ ಸಂತ್ರಸ್ತರ ಸಭೆಯಲ್ಲಿ ಅವರು ಮಾತನಾಡಿದರು.
ಹೋರಾಟದ ಮಾರ್ಗದಲ್ಲಿ ಸಾಗಿದರೆ ಸಂತ್ರಸ್ತರ ನ್ಯಾಯಕ್ಕಾಗಿ ಅಂತಹ ಹೋರಾಟಕ್ಕಾಗಿ ಸಂತ್ರಸ್ತರ ಜತೆಗೆ ನಾವು ಯಾವ ತ್ಯಾಗಕ್ಕೂ ಸಿದ್ಧ. ಎಲ್ಲ ಸಂತ್ರಸ್ತರು ಒಗ್ಗಟ್ಟಿನಿಂದ ತೀರ್ಮಾನ ತೆಗೆದುಕೊಂಡು ಮುಂದಿನ ರೂಪುರೇಷೆ ಸಿದ್ಧಪಡಿಸಬೇಕು ಎಂದರು. 1964ರಿಂದ ಆರಂಭವಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಇನ್ನೂ ಮುಕ್ತಾಯವಾಗಿಲ್ಲ ಎಂದರೆ ಸರ್ಕಾರಗಳು ಸಂತ್ರಸ್ತರನ್ನು ಎಷ್ಟು ಕಡೆಗಣಿಸಿವೆ ಎನ್ನುವುದು ತಿಳಿಯುತ್ತಿದೆ. ಈ ಯೋಜನೆಗೆ ಪ್ರತಿ ವರ್ಷ ಬಜೆಟ್‌ನಲ್ಲಿ 15 ಸಾವಿರ ಕೋಟಿ ರೂ. ಹಣ ಇಟ್ಟಿದ್ದರೆ ಯೋಜನೆ ಮುಕ್ತಾಯವಾಗುತ್ತಿತ್ತು.
ಈಗಲೂ ಕಾಲ ಮಿಂಚಿಲ್ಲ. ಸರ್ಕಾರ ಸಂತ್ರಸ್ತರ ಪರ ನಿಲ್ಲುವ ಕೆಲಸ ಆಗಬೇಕು. ವೇದಿಕೆ ಮುಖಂಡರು ಈ ಯೋಜನೆ ಕುರಿತಾಗಿ ಸಮಗ್ರ ಮಾಹಿತಿ ಸಂಗ್ರಹಿಸಿದ್ದಾರೆ. ಇವೆಲ್ಲವನ್ನು ಪಕ್ಷಾತೀತವಾಗಿ ಎಲ್ಲ ಶಾಸಕರು, ಸಚಿವರು, ಮಾಜಿ ಶಾಸಕರು ಗಮನಕ್ಕೆ ತಂದು ಸಂತ್ರಸ್ತರ ಸಮ್ಮುಖದಲ್ಲಿಯೇ ಸಭೆ ಮಾಡಿ ಮುಂದಿನ ತೀರ್ಮಾನ ಮಾಡಿ ಶೀಘ್ರ ಯೋಜನೆ ಅನುಷ್ಠಾನವಾಗುವಂತೆ ಮಾಡಬೇಕು ಎಂದರು.
ಈ ವೇಳೆ ಹಿರಿಯರಾದ ಎಸ್.ಟಿ. ಪಾಟೀಲ, ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್, ಮುತ್ತಪ್ಪ ಕೋಮಾರ, ಮಲ್ಲಪ್ಪ ಕಾಳಗಿ, ಜಿ.ಆರ್. ಪಾಟೀಲ, ಸಿದ್ದು ಗಿರಗಾಂವಿ, ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಶೈಲ ನಾಯಿಕ, ಈಶ್ವರ ಕೋನಪ್ಪವರ, ಗೌಡಪ್ಪಗೌಡ ಪಾಟೀಲ, ಅರವಿಂದ ಮುಚಗಂಡಿ, ಸುರೇಂದ್ರ ನಾಯಿಕ ಇತರರಿದ್ದರು.